ತಾಸುಮಳೆಗೆ ಕಿತ್ತುಹೋದ ತೇಪೆ !: ಪುರಸಭೆ ಹಾಗೂ ಪುತ್ತಿಗೆ ಗ್ರಾಪಂ ರಸ್ತೆಗಳ ಅವಸ್ಥೆ

New Project (21)
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ

ಮಳೆ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಪುರಸಭೆ ಹಾಗೂ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಕೆಲವೆಡೆ ರಸ್ತೆ ಹೊಂಡಗಳಿಗೆ ಕಳೆದ ವಾರವಷ್ಟೇ ತೇಪೆ ಹಾಕಿದ್ದು, ಸೋಮವಾರ ಸುರಿದ ಮಳೆಗೆ ಹೆಚ್ಚಿನ ಕಡೆಗಳಲ್ಲಿ ತೇಪೆ ಕಿತ್ತುಹೋಗಿ ಬೃಹತ್ ಹೊಂಡಗಳು ಮತ್ತೊಮ್ಮೆ ಬಾಯ್ತೆರೆದಿವೆ.

ಮೂಡುಬಿದಿರೆ ಪೇಟೆಯ ರಸ್ತೆ, ಸಮುದಾಯ ಆರೋಗ್ಯ ಕೇಂದ್ರ ಎದುರಿನ ರಸ್ತೆ ಸರ್ಕಲ್‌ನಲ್ಲಿ ಮತ್ತೊಮ್ಮೆ ಹೊಂಡಗಳು ಉಂಟಾಗಿವೆ. ಪುತ್ತಿಗೆ, ಪಾಲಡ್ಕ, ಕಡಂದಲೆ, ರಿಂಗ್‌ರೋಡ್‌ನಲ್ಲಿ ಹಾಕಿರುವ ತೇಪೆಗಳು ಮಳೆಯ ರಭಸಕ್ಕೆ ತೊಳೆದುಹೋಗಿದೆ. ಜತೆಗೆ ಸ್ವರಾಜ್ಯ ಮೈದಾನದ ರಸ್ತೆಯ ತೇಪೆಯು ಕಿತ್ತುಹೋಗಿದೆ.

ಮಿತ್ತಬೈಲು ರಸ್ತೆಯಲ್ಲಿ ಹೊಂಡ: ರಿಂಗ್‌ರೋಡ್‌ನಿಂದ ಬೆಳ್ಮಣ್ ರಸ್ತೆಗೆ ಸಂಪರ್ಕಿಸು ಕಡಲಕೆರೆ ಕೈಗಾರಿಕ ವಲಯದ ಎದುರಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪುತ್ತಿಗೆ ದ್ವಾರ, ಗುಡ್ಡೆಯಂಗಡಿ ಪ್ರದೇಶಗಳಲ್ಲಿಯೂ ರಸ್ತೆ ಹೊಂಡಮಯವಾಗಿದೆ. ಕೊಡ್ಯಡ್ಕ ದೇವಳದ ಹತ್ತಿರ, ಮಿತ್ತಬೈಲು ಜಂಕ್ಷನ್‌ನಲ್ಲಿ ಇರುವ ಹೊಂಡಗಳು ನೀರಿನಿಂದ ತುಂಬಿರುತ್ತವೆ. ಗುಡ್ಡೆಯಂಗಡಿ ದಾರಿಯಲ್ಲಿ ಸಂಚರವೇ ತ್ರಾಸದಾಯಕವಾಗಿದ್ದು, ಹೊಂಡಗುಂಡಿಗಳ ತಪ್ಪಿಸುವ ಭರದಲ್ಲಿ ಅಪಘಾಗಳೂ ಹೆಚ್ಚಾಗುತ್ತಿವೆ.

ಕೊಡಂಗಲ್ಲು-ಕಲ್ಲಬೆಟ್ಟು ರಸ್ತೆ: ಪುರಸಭೆ ವ್ಯಾಪ್ತಿಯ ಮೆಸ್ಕಾಂ ಬಳಿಯಿಂದ ವೇಣೂರು ಕಡೆಯ ರಸ್ತೆಯ ಅಲ್ಲಲ್ಲಿ ಹೊಂಡಗಳಿವೆ. ಶ್ರೀಮಹಾವೀರ ಕಾಲೇಜು ಬಳಿಯಿಂದ ಕಲ್ಲಬೆಟ್ಟು ತಿರುವಿನವರೆಗೆ ಹೊಂಡಗಳು ಅಪಾಕಾರಿಯಾಗಿವೆ. ಕೀರ್ತಿನಗರ ಕ್ರಾಸ್ ಬಳಿ ರಸ್ತೆಯ ಒಂದು ಭಾಗ ಭಾಗಶಃ ಹಾನಿಯಾಗಿದ್ದು, ವಾಹನ ಸಂಚಾರವೇ ಈ ಭಾಗದಲ್ಲಿ ಕಷ್ಟಸಾಧ್ಯ ಎಂಬ ಸ್ಥಿತಿಯಿದೆ.

ತೇಪೆಯಿಂದಲೇ ಹೆಚ್ಚು ತೊಂದರೆ

ಬಹುತೇಕ ಕಡೆಗಳಲ್ಲಿ ಮಳೆಗಾಲ ಆರಂಭಗೊಂಡ ಬಳಿಕ ರಸ್ತೆ ದುರಸ್ತಿ ನಡೆಯುವುದು ಮಾಮೂಲಾಗಿವೆ. ಕೆಲವೆಡೆ ಅಳವಡಿಸುವ ತೇಪೆ ತೀರಾ ಕಳಪೆಮಟ್ಟದಲ್ಲಿದ್ದು, ಒಂದೇ ಮಳೆಗೆ ಕೊಚ್ಚಿ ಹೋಗುತ್ತಿವೆ. ಕಿತ್ತುಹೋದ ಡಾಂಬಾರುಗಳಿಂದ ಧೂಳು, ಚರಳುಗಳು ಉಂಟಾಗಿ ಪುತ್ತಿಗೆ ಗ್ರಾಪಂ ವ್ಯಾಪ್ತಿ, ಕೊಡಂಗಲ್ಲು-ಕಲ್ಲಬೆಟ್ಟು, ಮಿತ್ತಬೈಲು ಭಾಗದಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿದೆ.

ಮೂಡುಬಿದಿರೆ ಬೆಳ್ಮಣ್ ರಸ್ತೆ ದುರಸ್ತಿಯಾಗಿ ದಶಕಗಳೇ ಕಳೆದಿದ್ದು, ಈ ಕುರಿತು ಈಗಾಗಲೇ ಮನವಿ ಸಲ್ಲಿಕೆ, ಪ್ರತಿಭಟನೆ ಎಲ್ಲವೂ ನಡೆದಿದೆ. ಮಳೆ ಆರಂಭಕ್ಕೂ ಮೊದಲು ದುರಸ್ತಿ ಆರಂಭಿಸುವುದು ಬಿಟ್ಟು ಮಳೆ ಬಂದ ನಂತ ಅವೈಜ್ಞಾನಿಕವಾಗಿ ಕಾರ್ಯ ನಡೆಸುತ್ತಾರೆ. ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಯಾವುದು ಯಾವ ಇಲಾಖೆಗೆ ಸಂಬಂಧಿಸಿದೆ ಎಂಬ ಗೊಂದಲವೂ ಇದೆ. ಪುರಸಭೆ ವ್ಯಾಪ್ತಿಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ತೇಪೆ ಹಾಕುವ ಬದಲು ಸಂಪೂರ್ಣ ರಸ್ತೆಯನ್ನೇ ದುರಸ್ತಿಗೊಳಿಸಬೇಕು. ಜಗದೀಶ್, ನಿತ್ಯ ಪ್ರಯಾಣಿಕ

  • ಅಲ್ಲಲ್ಲಿ ಜಲ್ಲಿ ಹರಡಿ ಸಂಚಾರಕ್ಕೆ ತೊಂದರೆ
  • ಕಳಪೆ ಗುಣಮಟ್ಟದ ದುರಸ್ತಿಯೆಂದು ಸಾಬೀತು
  • ಸ್ಥಳೀಯಾಡಳಿತ ವಿರುದ್ಧ ಗ್ರಾಮಸ್ಥರ ಅಸಮಾಧಾನ
ರಿಂಗ್‌ರೋಡ್ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಪ್ರದೇಶದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದು.
ರಿಂಗ್‌ರೋಡ್ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಪ್ರದೇಶದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪುತ್ತಿಗೆಯಲ್ಲಿ ಮಣ್ಣು ರಸ್ತೆಗೆ ಹರಡಿ ಕೆಸರಾಗಿರುವುದು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಪುತ್ತಿಗೆಯಲ್ಲಿ ಮಣ್ಣು ರಸ್ತೆಗೆ ಹರಡಿ ಕೆಸರಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net