ಕಾಸರಗೋಡಲ್ಲಿ ರಸ್ತೆ ಶೋಚನೀಯಾವಸ್ಥೆ: ಸೆ.29ರಿಂದ ಅನಿರ್ದಿಷ್ಟಾವಧಿ ಮುಷ್ಕರದತ್ತ ಖಾಸಗಿ ಬಸ್ ಕಾರ್ಮಿಕರು : ವಾಹನ ಸಂಚಾರ ದುಸ್ತರ

03
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲೆಯ ಎರಡು ಪ್ರಮುಖ ರಸ್ತೆಗಳ ಶೋಚನೀಯಾವಸ್ಥೆ ಬಗೆಹರಿಸುವಂತೆ ಆಗ್ರಹಿಸಿ ಈ ಎರಡೂ ರೂಟ್‌ನಲ್ಲಿ ಸೆ.29ರಿಂದ ಖಾಸಗಿ ಬಸ್ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಕಾಸರಗೋಡು- ಚೆರ್ಕಳ- ಬದಿಯಡ್ಕ- ಉಕ್ಕಿನಡ್ಕ ಹಾಗೂ ಕಾಸರಗೋಡು- ಚೆರ್ಕಳ- ನೆಲ್ಲಿಕಟ್ಟೆ- ಪೈಕ ರೂಟ್‌ನಲ್ಲಿ ಮುಷ್ಕರ ನಡೆಯಲಿದೆ. ‘ಪ್ರೈಡ್’ ಬಸ್ ಕಾರ್ಮಿಕರ ಸಂಘಟನೆ ಬದಿಯಡ್ಕ ವಲಯ ಸಮಿತಿ ಅಧ್ಯಕ್ಷ ಹ್ಯಾರಿಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಒಂದು ವರ್ಷದಿಂದ ಈ ರಸ್ತೆ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದರೂ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗದೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಹೊಂಡಗಳಿಂದ ವಾಹನ ಸಂಚಾರ ದುಸ್ತರವಾಗಿದೆ. ಈ ಹಾದಿಯಾಗಿ ನಿರಂತರ ವಾಹನ ಸಂಚಾರದಿಂದ ವಾಹನ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹಾದಿಯಾಗಿ ಸಂಚರಿಸುವ ಖಾಸಗಿ ಬಸ್ ಬೆಳಗ್ಗೆ, ಸಂಜೆ ವೇಳೆಗೆ ವಿದ್ಯಾರ್ಥಿಗಳಿಂದ ತುಂಬಿಕೊಳ್ಳುತ್ತಿದ್ದು ಬೃಹತ್ ಹೊಂಡಗಳಿಂದ ಅಪಘಾತ ಸಾಧ್ಯತೆ ಹೆಚ್ಚಾಗುತ್ತಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕು. ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಎಂಬಿಬಿಎಸ್ ತರಗತಿ ಆರಂಭಕ್ಕೆ ಈಗಾಗಲೇ ಹಸಿರು ನಿಶಾನಿ ಲಭಿಸಿರುವುದರಿಂದ ಪ್ರಸಕ್ತ ರಸ್ತೆಯನ್ನು ದುರಸ್ತಿಪಡಿಸಲು ಇಲಾಖೆ ಮುಂದಾಗುವಂತೆ ಬಸ್ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಚೆರ್ಕಳದಿಂದ ಉಕ್ಕಿನಡ್ಕವರೆಗೆ, ನೆಲ್ಲಿಕಟ್ಟೆಯಿಂದ ಮಲ್ಲ ಕ್ಷೇತ್ರ, ಮುಳ್ಳೇರಿಯಾ ತೆರಳುವ ಪೈಕ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗಾಗಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ, 'ಕಿಫ್ ಬಿ', ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಹ್ಯಾರಿಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net