

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅರಸಿಕಟ್ಟೆಯಿಂದ ನಾರಾವಿ ದೇವಸ್ಥಾನದವರೆಗೆ ರಾಜ್ಯ ಹೆದ್ದಾರಿ ಹೊಂಡಗುಂಡಿಗಳಿಂದ ತುಂಬಿದ್ದು, ಯಾರೂ ಓಡಾಟ ನಡೆಸದಂಥ ಪರಿಸ್ಥಿತಿ ನಿರ್ಮಾಣವಾದರೂ ಕೇಳುವ ಗತಿಯಿಲ್ಲ. ದಿನದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆದಿದೆ. ಆದರಿಂದ ಕೂಡಲೇ ರಸ್ತೆ ದುರಸ್ತಿಗೊಳಿಸಿ....
- ಇದು ನಾರಾವಿ ಗ್ರಾಮ ಪಂಚಾಯಿತಿ 2025-26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬಂದ ಆಗ್ರಹ.
ಅಧ್ಯಕ್ಷ ರಾಜವರ್ಮ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಗುಂಡಿಗೆ ಬಿದ್ದು ವಾಹನ ಜಖಂಗೊಂಡಿದೆ. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಪ್ಯಾಚ್ ಕೆಲಸ ಮಾಡುವ ಬದಲು ಕಾಂಕ್ರೀಟ್ ಅಥವಾ ಡಾಂಬರು ಅಳವಡಿಸಿದರೆ ಮಾತ್ರ ರಸ್ತೆ ಉಳಿಯಲು ಸಾಧ್ಯ ಎಂಬ ಬೇಡಿಕೆ ವ್ಯಕ್ತವಾಯಿತು.
ಆರ್ಥಿಕ ಸಾಕ್ಷರತೆ ಬಗ್ಗೆ ಉಷಾ ಕಾಮತ್ ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜೋಸೆಫ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಿಡಿಒ ಸುಧಾಕರ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ಯೋಗೀಣಿ ಶೆಟ್ಟಿ ಜಮಾ ಖರ್ಚಿನ ವಿವರ ಮಂಡಿಸಿದರು.
ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಉದಯ ಹೆಗ್ಡೆ, ಸಂತೋಷ್ ಮರ್ದೋಟ್ಟು, ಆಶಾಲತಾ, ಸುದರ್ಶನ್ ಹೆಗ್ಡೆ, ಮೀನಾ, ನಾರಾಯಣ ಪೂಜಾರಿ, ಯಶೋದಾ ಕುತ್ಲೂರು, ಮಮತಾ, ಮಲ್ಲಿಕಾ, ಡಯಾನ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ದಂತ ವೈದ್ಯರ ಕೊರತೆ
ನಾರಾವಿ ಗ್ರಾಪಂ ವ್ಯಾಪ್ತಿಯ ಆರೋಗ್ಯ ಕೇಂದ್ರಕ್ಕೆ ತಿಂಗಳಿಗೆ ಎರಡು ಬಾರಿಯಾದರೂ ದಂತ ವೈದ್ಯರು ಬರಬೇಕೆಂದು ಪಂಚಾಯಿತಿ ಸದಸ್ಯರಾದ ಸಂತೋಷ್ ಮರ್ದೊಟ್ಟು ಒತ್ತಾಯಿಸಿದರು. ಇಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಲ್ಯಾಬ್ ಟೆಕ್ನಿಷಿಯನ್ ಕೂಡ ಅಗತ್ಯವಾಗಿ ಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಅನುದಾನ ಬೇಡಿಕೆ
ಕುತ್ಲೂರು ಅಂಗನವಾಡಿಗೆ ಮಳೆಹಾನಿ ಯೋಜನೆಯಡಿ 2.50 ಲಕ್ಷ ರೂ. ಮಂಜೂರಾಗಿದೆ. ಇದರಲ್ಲಿ ಮೇಲ್ಛಾವಣಿ ಆಗಿದ್ದು, ಹೆಚ್ಚಿನ ಕಾಮಗಾರಿಯನ್ನು ಗ್ರಾಮಸ್ಥರು ಮಾಡಿದ್ದೇವೆ. ಅರ್ಧದಲ್ಲಿ ನಿಂತ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಎರಡು ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂಬ ದೂರು ವ್ಯಕ್ತವಾದಾಗ, ಎರಡು ತಿಂಗಳಿನಿಂದ ಬಂದಿಲ್ಲ, ಬರುತ್ತದೆ ಎಂದು ಅಧಿಕಾರಿ ತಿಳಿಸಿದರು.
ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಪೂರ್ಣ ಪ್ರಮಾಣದ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಪ್ರಗತಿಪರ ಕೆಲಸ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ರಾಜವರ್ಮ ಜೈನ್ ನಾರಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ
15 ಕೋಟಿ ರೂ. ಅನುದಾನ ಅನುಷ್ಠಾನ
ವಿಶೇಷವಾಗಿ ಗ್ರಾಮಸ್ಥರ ಆಶೋತ್ತರಗಳನ್ನು ಪೂರೈಸಲು ಸಹಕಾರ ನೀಡಿದ್ದೇವೆ. ಹೊಸ ಸಂಪರ್ಕ ರಸ್ತೆ, ದಾರಿದೀಪ ವಿಸ್ತರಣೆ, ನಿವೇಶನ ಹಂಚುವ ಪ್ರಯತ್ನ, ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಶಾಸಕ ಹರೀಶ್ ಪೂಂಜ ಅವರ 15 ಕೋಟಿ ರೂ. ಅನುದಾನವನ್ನು ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ ಎಂದು ಗ್ರಾಪಂ ಸದಸ್ಯ ಉದಯ್ ಹೆಗ್ಡೆ ತಿಳಿಸಿದರು.