ಪಳ್ಳತ್ತಡ್ಕದಲ್ಲಿ ಹೊಂಡಗಳಿಗಿಲ್ಲ ಮುಕ್ತಿ: ಪ್ರತಿಭಟನೆಗೂ ಜಗ್ಗದ ಇಲಾಖೆ : ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಮುಗಿಯದ ಸಂಕಷ್ಟ

06
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಯ ಬದಿಯಡ್ಕ ಸನಿಹದ ಪಳ್ಳತ್ತಡ್ಕದಲ್ಲಿ ಉಂಟಾಗಿರುವ ಬೃಹತ್ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಇನ್ನೂ ಮುಂದಾಗಿಲ್ಲ.

ಈ ಪ್ರದೇಶದಲ್ಲಿ 200 ಮೀ. ಉದ್ದಕ್ಕೆ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಲ್ಲಿ ಆಟೋರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಭಾರಿ ಗಾತ್ರದ ಟೋರಸ್ ವಾಹನಗಳ ಚಾಲಕರೇ ಇಲ್ಲಿ ಹರಸಾಹಸ ಪಡುತ್ತಿದ್ದು, ಇನ್ನು ಸಣ್ಣ ವಾಹನಗಳ ಚಾಲಕರು ರಸ್ತೆಯಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ. ಈ ಪ್ರದೇಶದ ಜನತೆ ರಸ್ತೆಯಲ್ಲಿ ಉಂಟಾಗಿದ್ದ ಹೊಂಡದ ನೀರಲ್ಲಿ ಈಜುವುದು, ರಸ್ತೆ ಹೊಂಡದಲ್ಲಿ ಬಾಳೆಗಿಡ ನೆಡುವುದು ಸೇರಿದಂತೆ ವಿವಿಧ ಮಾದರಿಯ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆಯಲ್ಲಿನ ಹೊಂಡದಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಈಜಾಡುವ ಹಾಗೂ ನೀರನ್ನು ಮೈಮೇಲೆ ಸುರಿದುಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ನೇತೃತ್ವದಲ್ಲಿ ನಡೆದ ವಿಶಿಷ್ಟ ರೀತಿಯ ಪ್ರತಿಭಟನೆ ಕೂಡ ಅಧಿಕಾರಿಗಳ ಕಣ್ಣು ತೆರೆಸಲಾಗಿಲ್ಲ. ಇನ್ನು ರಸ್ತೆ ನಡುವಿನ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದರೂ ಇಲಾಖೆ ಜಪ್ಪೆನ್ನುತ್ತಿಲ್ಲ.

ಇಲಾಖೆಯಿಂದ ನಿರ್ಲಕ್ಷ್ಯ ಧೋರಣೆ

ಪಳ್ಳತ್ತಡ್ಕದಲ್ಲಿ ಕಳೆದ ಹಲವು ವರ್ಷಗಳಿಂದಲೂ ರಸ್ತೆ ಶಿಥಿಲಗೊಳ್ಳುತ್ತಿದ್ದರೂ ಇದಕ್ಕೆ ಕಾಯಂ ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ವಿಪರ್ಯಾಸವೆಂದರೆ ಇಲ್ಲಿ ರಸ್ತೆ ಅಂಚಿಗೆ ನೀರು ಹರಿಯುವ ಚರಂಡಿಯ ಹೂಳು ತೆಗೆಯುವಲ್ಲೂ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ರಸ್ತೆಯಲ್ಲಿ ನೀರು ಹರಿಯಲು ಪ್ರಮುಖ ಕಾರಣವಾಗುತ್ತಿದೆ.

ಗುತ್ತಿಗೆದಾರರ ಬಗ್ಗೆ ಮೃದು ಧೋರಣೆ

ವರ್ಷಗಳ ಹಿಂದೆಯಷ್ಟೆ ಚೆರ್ಕಳದಿಂದ ಅಡ್ಕಸ್ಥಳವರೆಗೆ ಮರು ಡಾಂಬರು ನಡೆಸಿ ರಸ್ತೆಯನ್ನು ತರಾತುರಿಯಿಂದ ಅಭಿವೃದ್ಧಿಗೊಳಿಸಲಾಗಿತ್ತು. ಚೆರ್ಕಳದಿಂದ ಉಕ್ಕಿನಡ್ಕವರೆಗಿರುವ ರಸ್ತೆ ಒಬ್ಬ ಗುತ್ತಿಗೆದಾರನಿಗೆ ಟೆಂಡರ್ ನೀಡಿದ್ದರೆ, ಅಲ್ಲಿಂದ ಮುಂದೆ ಅಡ್ಕಸ್ಥಳವರೆಗೆ ಇನ್ನೊಬ್ಬ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ಕಾಮಗಾರಿಯ ಅಂತಿಮ ಹಂತದ ಕೆಲಸ ಇನ್ನೂ ಪೂರ್ಣಗೊಳಿಸಿಲ್ಲ. ಇದರಿಂದ ಪಳ್ಳತ್ತಡ್ಕ ಪ್ರದೇಶದಲ್ಲಿ ಪ್ರತಿವರ್ಷ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡಗಳುಂಟಾಗುತ್ತಿದ್ದು, ಇದಕ್ಕೆ ತೇಪೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿದೆ. ಇಲ್ಲಿ ರಸ್ತೆ ಅಂಚಿಗೆ ಸೂಕ್ತ ಚರಂಡಿ ನಿರ್ಮಿಸುವುದರ ಜತೆಗೆ ಭಾರಿ ಪ್ರಮಾಣದಲ್ಲಿ ಹರಿದು ಬರುವ ಮಳೆನೀರನ್ನು ರಸ್ತೆಗೆ ಹರಿಯದಂತೆ ತಡೆಗೋಡೆ ನಿರ್ಮಿಸಬೇಕಾದ ಅಗತ್ಯವಿದೆ. ಚೆರ್ಕಳದಿಂದ ಉಕ್ಕಿನಡ್ಕವರೆಗಿನ ರಸ್ತೆ ಎಡನೀರು, ನೆಕ್ರಾಜೆ, ಚೆಡೆಕ್ಕಲ್, ಕರಿಂಬಿಲ, ಪಳ್ಳತ್ತಡ್ಕ ಸೇರಿದಂತೆ ವಿವಿಧೆಡೆ ಸಂಪೂರ್ಣ ಹದಗೆಟ್ಟಿದೆ. ಕೆಲಸ ಪೂರೈಸದ ಗುತ್ತಿಗೆದಾರರ ಬಗ್ಗೆ ಮೃದು ಧೋರಣೆ ತಳೆಯುತ್ತಿರುವ ಇಲಾಖೆಯು ರಸ್ತೆ ಶಿಥಿಲಾವಸ್ಥೆ ಬಗ್ಗೆಯೂ ಚಕಾರವೆತ್ತುತ್ತಿಲ್ಲ.

ಚೆರ್ಕಳ- ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕದಲ್ಲಿ ರಸ್ತೆ ಶಿಥಿಲಾವಸ್ಥೆ ಬಗ್ಗೆ ಇಲಾಖೆ ಗಮನಹರಿಸಿದ್ದು, ಇಲ್ಲಿನ ಹೊಂಡಗಳನ್ನು ಮುಚ್ಚುವ ಕಾರ್ಯ ಶೀಘ್ರ ನಡೆಯಲಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಸಿ.ಜೆ.ಕೃಷ್ಣನ್, ಮುಖ್ಯ ಅಭಿಯಂತ, ಲೋಕೋಪಯೋಗಿ ಇಲಾಖೆ, ರಸ್ತೆ ವಿಭಾಗ(ಕಿಫ್‌ಬಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net