

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ‘ತೋಡ್ ಆ್ಯಂಡ್ ರೋಡ್’ ಎಂಬ ವಿಶಿಷ್ಟ ಪರಿಕಲ್ಪನೆ ಜಾರಿಯಲ್ಲಿದ್ದು, ಜನತೆಯ ಗಮನ ಸೆಳೆದಿದೆ. ಈ ವಿಶಿಷ್ಟ ಸೌಲಭ್ಯದಿಂದ ಪ್ರಯಾಣಿಕರು ನಿತ್ಯವೂ ಹೈರಾಣಾಗಿದ್ದಾರೆ.
ಹೌದು...! ಸಣ್ಣ ಮಳೆ ಬಂದರೆ ಸಾಕು ಕಾಸರಗೋಡಿನ ರಸ್ತೆಗಳು ಕ್ಷಣ ಮಾತ್ರದಲ್ಲಿ ತೋಡಾಗಿ ಪರಿವರ್ತನೆಯಾಗುತ್ತಿದ್ದು, ನಗರಸಭೆಯ ಆಡಳಿತವನ್ನು ಜನರು ಅಣಕಿಸುವಂತಾಗಿದೆ. ರಸ್ತೆಯಲ್ಲಿ ಹರಿಯುವ ಮಳೆ ನೀರಿನಿಂದ ವಾಹನ ಚಾಲಕರು ಹಾಗು ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಸೂಕ್ತ ಒಳಚರಂಡಿ ವ್ಯವಸ್ಥೆಯಿಲ್ಲದೆ ಮಳೆನೀರು ಅಗಾಧ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯುವಂತಾಗಿದೆ. ಇನ್ನು ಇರುವ ಚರಂಡಿಗಳೊಳಗೆ ತ್ಯಾಜ್ಯ ತುಂಬಿ ಮಳೆನೀರು ಹರಿಯಲಾಗದೆ ರಸ್ತೆಯೇ ತೋಡಾಗಿ ಬದಲಾಗುವ ಅನಿವಾರ್ಯತೆ ಎದುರಾಗಿದೆ.
ನಗರದ ಬಹುತೇಕ ಕಡೆ ರಸ್ತೆ ಅಂಚಿನ ಒಳಚರಂಡಿ ಸಮರ್ಪಕವಾಗಿಲ್ಲ. ಹೊಸ ಬಸ್ ನಿಲ್ದಾಣ ಸನಿಹದ ಕೋಟೆಕಣಿ ರಸ್ತೆ, ಪ್ರೆಸ್‌ಕ್ಲಬ್ ಜಂಕ್ಷನ್, ಬ್ಯಾಂಕ್ ರಸ್ತೆ, ಕೆ.ಪಿ.ಆರ್.ರಾವ್ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಮಳೆನೀರು ರಸ್ತೆಯಲ್ಲೇ ಹರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಈ ಪ್ರದೇಶದೆಲ್ಲೆಡೆ ರಸ್ತೆ ಶಿಥಿಲಾವಸ್ಥೆಯಲ್ಲಿದೆ. ಸಣ್ಣ ಹೊಂಡಗಳೂ ಬೃಹದಾಕಾರಪಡೆದುಕೊಳ್ಳುತ್ತಿದ್ದು, ದ್ವಿಚಕ್ರ ವಾಹನ, ಆಟೋರಿಕ್ಷಾಗಳಿಗೆ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಅತ್ಯಂತ ಶೋಚನೀಯ
ಕರಂದಕ್ಕಾಡಿನಿಂದ ಮಧೂರು ರಸ್ತೆ ಕೂಡ್ಲುವರೆಗೂ ಅತ್ಯಂತ ಶೋಚನೀಯವಾಗಿದೆ. ಕರಂದಕ್ಕಾಡಿನಿಂದ ಬ್ಯಾಂಕ್ ರಸ್ತೆ ಹಾದಿಯಾಗಿ ರೈಲ್ವೆ ನಿಲ್ದಾಣ ತೆರಳುವ ರಸ್ತೆಯಂತೂ ಹೇಳ ಹೆಸರಿಲ್ಲದಂತೆ ಹಾನಿಗೊಂಡಿದೆ. ಮಳೆನೆಪದಲ್ಲಿ ರಸ್ತೆ ದುರಸ್ತಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸುವ ಅಧಿಕಾರಿಗಳು, ಮಳೆ ದೂರಾದರೂ, ತಾತ್ಕಾಲಿಕ ದುರಸ್ತಿಗೂ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ನಗರ ಪ್ರದೇಶದಲ್ಲಿನ ರಸ್ತೆಗಳ ದುರಸ್ತಿ ಬಗ್ಗೆ ನಗರಸಭಾ ಆಡಳಿತ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಿಎಂಎಸ್ ಕಾರ್ಮಿಕ ಸಂಟನೆ ಪ್ರತಿಭಟನೆಯನ್ನೂ ನಡೆಸಿತ್ತು.