ಮನವಿ ಸಲ್ಲಿಸಿದರೂ ಕಾಣದ ಅಭಿವೃದ್ಧಿ!: ಆಲಂತಾಯ ಹಳೆನೇರಿಂಕಿ ರಸ್ತೆ ಅಯೋಮಯ : ಬಹುಕಾಲದ ಬೇಡಿಕೆಗಿಲ್ಲ ಮನ್ನಣೆ

New Project (17)
Published on

ಪ್ರವೀಣ್‌ರಾಜ್ ಕೈೊಲ ಕಡಬ

ತಾಲೂಕಿನ ಆಲಂತಾಯ ಗ್ರಾಮ ಮತ್ತು ಹಳೆನೇರಿಂಕಿ ಗ್ರಾಮಗಳನ್ನು ಸಂದಿಸುವ ಬಹುಮುಖ್ಯ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗಬೇಕೆಂದು ಈ ಭಾಗದ ಜನತೆ ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಕೂಗು ಕೇಳಿಬಂದಿದೆ.

ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಆಲಂತಾಯ ಬಸ್ ನಿಲ್ದಾಣದಿಂದ ಆರಂಭಗೊಳ್ಳುವ ಈ ರಸ್ತೆ ಗ್ರಾಮೀಣ ಭಾಗಗಲ್ಲಿ ಹಾದು ಹೋಗಿ ಉಪ್ಪಿನಂಗಡಿ ಹಾಗು ಆಲಂಕಾರು ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳೆನೇರಿಂಕಿ ಪೇಟೆಯನ್ನು ಸಂಪರ್ಕಿಸುತ್ತದೆ. ಸುಮಾರು 7 ಕಿ.ಮೀ.ನಷ್ಟು ಉದ್ದವಿರುವ ಈ ರಸ್ತೆ ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಸುಮಾರು 60 ವರ್ಷಗಳಿಂದ ಊರ್ಜಿತದಲ್ಲಿದೆ. ಈ ರಸ್ತೆಯ ಕೆಲವೊಂದು ಪ್ರದೇಶದಲ್ಲಿ ಕೆಲವೇ ಮೀಟರ್‌ನಷ್ಟು ಕಾಂಕ್ರಿಟಿಕರಣಗೊಳಿಸಲಾಗಿದೆ. ಅದೆಲ್ಲವೂ ಒಟ್ಟು ಸೇರಿಸಿದರೆ ಸುಮಾರು 1.5 ಕಿ.ಮೀ. ಮಾತ್ರ ಅಭಿವೃದ್ಧಿಯಾಗಿದೆ. ಇನ್ನುಳಿದೆಲ್ಲವೂ ಮಣ್ಣಿನ ರಸ್ತೆಯಾಗಿದೆ.

ಅರಂತಬೈಲು, ಸೆನೆಕೆರೆ, ಪಾದೆನಾರು, ಹಿರಿಂಜ, ಹೊಸಮಾರಡ್ಡ, ಶಾಂತಿಮೂಲೆ ಮುಂತಾದ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಿದೆ. ಅರಣ್ಯ ಇಲಾಖೆಯವರು ಶಿಮಾರು ಮಲೆಗೆ ತೆರಳಬೇಕಾದರೆ ಈ ರಸ್ತೆ ಉಪಯೋಗಿಸುತ್ತಾರೆ. ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಏರು ಮತ್ತು ಇಳಿಜಾರು ಪ್ರದೇಶಗಳೇ ಜಾಸ್ತಿಯಾಗಿದೆ. ಚಂರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಮಳೆ ನೀರು ಹರಿದು ಹೋಗುತ್ತಿದೆ. ಮಳೆಗಾಲದಲ್ಲಿ ಈ ಮಣ್ಣಿನ ರಸ್ತೆ ಕೆಸರುಗದ್ದೆಯಾಗಿ ಸಂಚರಿಸುವುದೇ ಕಷ್ಟವಾಗುತ್ತದೆ. ಸುಮಾರು ಸಾವಿರಕ್ಕೂ ಅಧಿಕ ಜನ ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಬಹುತೇಕ ಕೃಷಿಕರು, ಹೈನುಗಾರರು, ವಿದ್ಯಾರ್ಥಿಗಳು ಈ ರಸ್ತೆಯನ್ನು ಬಳಕೆ ಮಾಡುತ್ತಾರೆ. ಕೆಲವೊಂದು ಭಾಗದಲ್ಲಿ ಸ್ಥಳೀಯರು ಒಟ್ಟು ಸೇರಿ ದುರಸ್ತಿಪಡಿಸುತ್ತಾರೆ.

ಚುನಾವಣೆ ಬಂದಾಗ ಭರವಸೆಗಳ ಮಹಾಪೂರ!

ಮಳೆಗಾಲ ಬಂತೆಂದರೆ ಈ ರಸ್ತೆಯ ದುರವಸ್ಥೆಯಿಂದ ಹಲವು ಕುಟುಂಬಗಳು ತೊಂದರೆ ಅನುಭವಿಸುತ್ತಾರೆ. ಇಲ್ಲಿನ ಗ್ರಾಮ ಪಂಚಾಯಿತಿ ಪ್ರತಿ ಗ್ರಾಮಸಭೆಯಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದು ನಿರ್ಣಯ ಅಂಗೀಕರಿಸಿ ಅನುದಾನ ಕೊಡುವಂತೆ ಸಂಬಂಧಪಟ್ಟವರಿಗೆ ಅನೇಕ ಮನವಿ ಸಲ್ಲಿಸಲಾಗಿದೆ. ಸಂಪೂರ್ಣ ಅಭಿವೃದ್ಧಿಗೊಳಿಸಬೇಕೆಂಬ ಮನವಿಯನ್ನು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸಲ್ಲಿಸಲಾಗಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಚುನಾವಣೆ ಬಂದಾಗ ಅಭಿವೃದ್ಧಿಯ ಭರವಸೆ ದೊರೆಯುತ್ತದೆ. ಆದರೆ ಮತ್ತೆ ನೆನಪಾಗುವುದು ಮತ್ತೊಂದು ಚುನಾವಣೆ ಪ್ರಾರಂಭವಾದಾಗ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೊನೆಯ ಪ್ರಯತ್ನಕ್ಕೆ ಮುಂದಾದ ಸ್ಥಳೀಯರು

ಇಲ್ಲಿನ ಜನತೆ ಕೊನೆಯ ಪ್ರಯತ್ನವೆಂಬಂತೆ ಮತ್ತೊಮ್ಮೆ ಸಂಸದರು, ಕ್ಷೇತ್ರದ ಶಾಸಕಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಇದಕ್ಕೆಲ್ಲ ಯಾವ ರೀತಿ ಸ್ಪಂದನೆ ದೊರೆಯುತ್ತದೆ ಎನ್ನುವ ಆಧಾರದಲ್ಲಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎನ್ನುತಾರೆ ಸ್ಥಳೀಯರು.

ಆಲಂತಾಯದಿಂದ ಹಳೆನೇರೆಂಕಿ ಸಂಪರ್ಕ ರಸ್ತೆ ಈ ಭಾಗದ ಜನತೆಗೆ ಬಹುಮುಖ್ಯ ರಸ್ತೆ. ಸಂಪೂರ್ಣ ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಸಾಕಾಗಿದೆ. ನೂತನ ಸಂಸದರಿಗೆ, ಶಾಸಕರಿಗೆ ಮತ್ತೊಮ್ಮೆ ಬೇಡಿಕೆ ಸಲ್ಲಿಸಲಾಗುವುದು. ಪೂರಕ ಸ್ಪಂದನೆ ದೊರೆಯದಿದಲ್ಲಿ ಹೋರಾಟಕ್ಕಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ತೇಜ ಕುಮಾರ್ ಪೆರ್ನಾರ್‌ಬೈಲು ಆಲಂತಾಯ ಸ್ಥಳೀಯರು ನಾನು ತಾಪಂ ಸದಸ್ಯೆಯಾಗಿದ್ದ ಸಂದರ್ಭ ಆಲಂತಾಯ ಹಳೆನೇರೆಂಕಿ ರಸ್ತೆಗೆ ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ, ಕ್ಷೇತ್ರದ ಶಾಸಕರಾಗಿದ್ದ ಎಸ್.ಅಂಗಾರ ಅವರ ವಿಶೇಷ ಮುತುವರ್ಜಿಯಿಂದ ಒಟ್ಟು 1.5 ಕಿ.ಮೀ. ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ತಾಲೂಕು ಪಂಚಾಯಿತಿ ಅನುದಾನದಲ್ಲಿ ರಸ್ತೆಯ ಕೆಲವೊಂದು ಭಾಗದಲ್ಲಿ ಚರಂಡಿ, ಮಣ್ಣಿನ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಸಂಪೂರ್ಣ ರಸ್ತೆ ಅಭಿವೃದ್ಧಿ ಬೇಡಿಕೆಯಿದೆ. ಕ್ಷೇತ್ರದ ಶಾಸಕರಿಗೆ ಬೇಡಿಕೆಯ ಬಗ್ಗೆ ಮನವರಿಕೆ ಮಾಡಲಾಗುವುದು. ತೇಜಸ್ವಿನಿ ಕಟ್ಟಪುಣಿ ಕಡಬ ತಾಪಂ ಮಾಜಿ ಸದಸ್ಯೆ https://www.vijayavani.net/bhajana-parishad-meeting-at-guruvayankare https://www.vijayavani.net/abhiyan

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net