

ಧನಂಜಯ ಗುರುಪುರ
ಎಡಪದವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲಿನಲ್ಲಿ ಕಾಂಕ್ರೀಟ್ ರಸ್ತೆಯೊಂದು ಡಾಂಬರು ರಸ್ತೆಯಾಗಿ ಪರಿವರ್ತನೆಗೊಳ್ಳುತ್ತಿದೆ..! ಈ ರೀತಿಯ ಕಾಮಗಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಎನ್ನಬಹುದು.
ಎಡಪದವು ಜಂಕ್ಷನ್‌ನಿಂದ ಮೇಲ್ಭಾಗದಲ್ಲಿ ಲೋಕೋಪಯೋಗಿ ಇಲಾಖೆ(ಪಿಡಬ್ಲುೃಡಿ) ಕಾಮಗಾರಿ ನಡೆಸುತ್ತಿದೆ. ಒಟ್ಟು 3 ಕಿ.ಮೀ. ಉದ್ದದ ರಸ್ತೆಯ ಅರ್ಧ ಕಿ.ಮೀ. ಅಂತರದಲ್ಲಿ ಕಾಂಕ್ರೀಟ್ ರಸ್ತೆ ಇದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ರಸ್ತೆ ಸದ್ಯ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಅಚ್ಚರಿಯ ಸಂಗತಿಯೆಂದರೆ ಈ ಅರ್ಧ ಕಿ.ಮೀ. ಅಂತರದ ಉತ್ತಮ ಕಾಂಕ್ರೀಟ್ ರಸ್ತೆಗೆ ಈಗ ಡಾಂಬರು ಅಳವಡಿಸಲಾಗುತ್ತಿದೆ. ಸಂಪೂರ್ಣ ಹದಗೆಟ್ಟ ರಸ್ತೆ ಅಭಿವೃದ್ಧಿಗೂ ಅನುದಾನ ಇಲ್ಲ ಎಂದಿರುವ ಸರ್ಕಾರ, ಕೋಟ್ಯಂತರ ರೂ. ಪೋಲು ಮಾಡುವ ಕಾಮಗಾರಿ ಹೇಗೆ ನಡೆಸುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಪೂಪಾಡಿಕಲ್ಲು ರಸ್ತೆ ಪಿಡಬ್ಲುೃಡಿ ಮೂಲಕ ಈಗಿರುವ ಮೂರು ಮುಕ್ಕಾಲು ಮೀಟರಿನಿಂದ ಐದೂವರೆ ಮೀಟರ್‌ಗೆ ವಿಸ್ತರಣೆಗೊಂಡಿದೆ. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವಧಿಯಲ್ಲಿ ಜಿಪಂ ವತಿಯಿಂದ ‘ನಮ್ಮ ಗ್ರಾಮ ನಮ್ಮ ಯೋಜನೆ’ಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿತ್ತು. ಸದ್ಯ ಪೂಪಾಡಿಕಲ್ಲಿನಲ್ಲಿರುವ ಕಲ್ಲಿನ ಕ್ವಾರೆಯವರ ಅನುಕೂಲಕ್ಕಾಗಿ ಒಟ್ಟು 3 ಕಿ.ಮೀ. ಉದ್ದದ ರಸ್ತೆ ಡಾಂಬರುಗೊಳ್ಳುತ್ತಿದೆ. ರಸ್ತೆಯ ಅರ್ಧ ಕಿ.ಮೀ. ಅಂತರದ ಕಾಂಕ್ರೀಟ್ ರಸ್ತೆಗೂ ಪುಕ್ಕಟೆ ಡಾಂಬರು ಹಾಸಲಾಗುತ್ತಿದೆ.
ಅರ್ಧ ಕಿ.ಮೀ. ಅಂತರದಲ್ಲಿ ಕಾಂಕ್ರೀಟ್ ರಸ್ತೆ ಇದ್ದು, ರಸ್ತೆ ವಿಸ್ತರಣೆ ಜಾಗದಲ್ಲಿ ಕಾಂಕ್ರೀಟ್ ಹಾಕಿದರೆ ರಸ್ತೆ ಬಾಳಿಕೆಗೆ ಧಕ್ಕೆ ಉಂಟಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಎಲ್ಲ ಕಡೆ ಡಾಮರು ರಸ್ತೆ ನಿರ್ಮಿಸಲಾಗುತ್ತಿದೆ. ಕಾಂಕ್ರೀಟ್ ರಸ್ತೆ ಭಾಗಕ್ಕೆ ವಿಶಿಷ್ಟ ಲೇಯರ್ ಬಳಸಿ ಡಾಮರು ರಸ್ತೆ ಮಾಡಲಾಗುತ್ತಿದೆ. ಶ್ರೀಕಾಂತ್, ಪಿಡಬ್ಲುೃಡಿ ಇಂಜಿನಿಯರ್ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗುಡ್ಡಗಾಡಿನಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು ಅಳವಡಿಸಿದರೆ ಹೆಚ್ಚು ಬಾಳಿಕೆ ಇರುವುದಿಲ್ಲ. ಮಳೆಗಾಲದಲ್ಲಿ ಎಲ್ಲ ತಂತ್ರಜ್ಞಾನದ ಗಟ್ಟಿತನ ಬಹಿರಂಗವಾಗಲಿದೆ. ಕಾಂಕ್ರೀಟ್ ರಸ್ತೆ ವಿಸ್ತರಣೆ ಅಗತ್ಯವಿದ್ದಲ್ಲಿ ಕಾಂಕ್ರೀಟ್ ಕಾಮಗಾರಿಯೇ ನಡೆಸಬೇಕು. ಉತ್ತಮವಾಗಿರುವ ಕಾಂಕ್ರೀಟ್ ರಸ್ತೆಗೆ ಡಾಂಬರು ಹಾಕುತ್ತಿರುವುದು ಜಿಲ್ಲೆಯಲ್ಲೇ ಪ್ರಥಮ ಎನ್ನಬಹುದು. ಪಂಚಾಯಿತಿ ಗಮನಕ್ಕೆ ತರದೆ ಕಾಮಗಾರಿ ನಡೆಯುತ್ತಿದೆ. ಸ್ಥಳೀಯರ ಸಂಶಯಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು. ಗೋಪಾಲ ಪೂಜಾರಿ, ಉಪಾಧ್ಯಕ್ಷರು, ಎಡಪದವು ಗ್ರಾಮ ಪಂಚಾಯಿತಿ
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ
10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ(ಡ್ಯಾಂಪ್ ಪ್ರೂಫ್ ಮೆಂಬ್ರೇನ್ ಟೆಕ್ನಾಲಜಿ) ಬಳಸಿ ಕಾಮಗಾರಿ ನಡೆಯುತ್ತಿದೆ. ನಿಯಮ ಪ್ರಕಾರ ಮುಂದಿನ 5 ವರ್ಷದವರೆಗೆ ಈ ರಸ್ತೆ ನಿರ್ವಹಣೆ ಗುತ್ತಿಗೆ ಕಂಪನಿಗಿರುತ್ತದೆ. ಗುತ್ತಿಗೆದಾರ ರಸ್ತೆ ಹಸ್ತಾಂತರಿಸುವ ಸಂದರ್ಭ ಮತ್ತೊಂದು ಬಾರಿ ರಸ್ತೆ ದುರಸ್ತಿ ನಡೆಸಬೇಕಾಗುತ್ತದೆ. ಕಾಂಕ್ರೀಟ್ ರಸ್ತೆಗೆ ಡಾಂಬರು ವಿರಳವಾಗಿದ್ದರೂ ಇಲ್ಲಿ ಡಾಂಬರು ರಸ್ತೆ ನಿರ್ಮಾಣಕ್ಕೆ ತಜ್ಞರ ನಿರ್ದೇಶನವಿದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.