ಜಾರಿ ಬೀಳೋದು ಇಲ್ಲಿ ಕಾಮನ್!

road
Published on

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ

ಹೆಸರಿಗೆ ಹೈಟೆಕ್ ಲೇಔಟ್, ಈ ಹೈಟೆಕ್ ಹೆಸರಿಗೆ ಅಪವಾದ ಎಂಬಂತೆ ಅದ್ವಾನವಾಗಿರುವ ರಸ್ತೆಯಲ್ಲಿ ಪ್ರತಿನಿತ್ಯ ಜನ ಜಾರಿಬೀಳುವುದು ಕಾಮನ್.

ಹೊಸಕೋಟೆ ತಾಲೂಕು ನಗರಸಭೆಯ ವಾರ್ಡ್ 31ರಲ್ಲಿನ ನಿಸರ್ಗ ಲೇಔಟ್‌ನಲ್ಲಿನ ಸುಮಾರು ಕಿ.ಮೀ ಉದ್ದ ಕೆಸರುಗದ್ದೆಯಾಗಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು ಜಾರಿ ಬಿದ್ದು ಗಾಯಗೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಲವು ವರ್ಷದಿಂದ ಇದೇ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯ ಜನರಿಗೆ ಶಾಶ್ವತ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಈ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರೆ ರಸ್ತೆಪೂರ್ತಿ ಕೆಸರುಮಯವಾಗಿದೆ. ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಅದೇಗೋ ಸರ್ಕಸ್ ಮಾಡುತ್ತಾ ಸಾಗಿದರೂ ಕೆಲವರು ಜಾರಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.

ನಗರಸಭೆ ಅಸಹಾಯಕತೆ:ಈ ರಸ್ತೆಯ ಅವ್ಯವಸ್ಥೆ ಬಗ್ಗೆ ನಗರಸಭೆ ಕೈಕಟ್ಟಿಕುಳಿತುಕೊಳ್ಳುವಂತಾಗಿದೆ. ಈ ಬಡಾವಣೆ ನಿರ್ಮಾಣದ ವೇಳೆ ಸಮರ್ಪಕ ಚರಂಡಿ, ರಸ್ತೆ ನಿರ್ಮಾಣ ಮಾಡಿಲ್ಲ ಎಂಬುದು ನಗರಸಭೆ ಆರೋಪವಾಗಿದೆ. ಅಲ್ಲದೆ ಈ ರಸ್ತೆಗೆ ಡಾಂಬರೀಕರಣ ನಡೆಸಲು ಅನುದಾನ ಇಲ್ಲ ಏನ್ಮಾಡುದು ಎಂದು ನಗರಸಭೆ ಅಸಹಾಯತೆ ವ್ಯಕ್ತಪಡಿಸುತ್ತಿದೆ. ಇರುವ ಅನುದಾನದಲ್ಲಿ ಬೀದಿದೀಪ ದುರಸ್ತಿ, ಚರಂಡಿಗಳಲ್ಲಿ ಹೂಳು ತೆಗೆಯುವುದು ಮತ್ತಿತರ ಸಣ್ಣಪುಟ್ಟ ಕೆಲಸ ಮಾಡಬಹುದಷ್ಟೇ ರಸ್ತೆ ಡಾಂಬರೀಕರಣಕ್ಕೆ ಕೋಟ್ಯಂತರ ಹಣ ಇಲ್ಲ ಎಂಬುದು ನಗರಸಭೆ ಅಳಲಾಗಿದೆ.

ಅಂಟು ಮಣ್ಣು ಸುರಿದರು:ಈ ಹಿಂದೆ ರಸ್ತೆ ದುರಸ್ತಿಗಾಗಿ ಜಲ್ಲಿಕಲ್ಲು ಸುರಿಯಲಾಗಿತ್ತು, ರಸ್ತೆ ಗಟ್ಟಿಯಾಗಿದ್ದರಿಂದ ಸಾರ್ವಜನಿಕರು ಅದೇಗೋ ಸರ್ಕಸ್ ಮಾಡುತ್ತಾ ಸಾಗುತ್ತಿದ್ದರು, ಆದರೆ ಕೆಲವು ತಿಂಗಳ ಹಿಂದೆ ರಾತ್ರೋರಾತ್ರಿ ಲೋಡ್‌ಗಟ್ಟಲೆ ಮಣ್ಣು ತಂದು ಸುರಿಯಲಾಗಿದೆ. ಮಳೆ ಇಲ್ಲದ ವೇಳೆ ರಸ್ತೆಗೆ ಬಿದ್ದ ಮಣ್ಣಿನಿಂದ ತುಸು ರಸ್ತೆ ಸಮತಟ್ಟಾದಂತೆ ಕಂಡುಬರುತ್ತಿತ್ತು. ಆದರೆ ಮಳೆಯಿಂದಾಗಿ ಸುರಿದ ಮಣ್ಣು ರಸ್ತೆಯಲ್ಲಿ ಕೆಸರುಗದ್ದೆ ನಿರ್ಮಾಣ ಮಾಡಿದೆ. ಇಲ್ಲಿ ಸುರಿದಿರುವ ಮಣ್ಣು ಅಂಟುಮಣ್ಣಾಗಿದ್ದು ದ್ವಿಚಕ್ರವಾಹನಗಳು ಆಯತಪ್ಪುವುದು ಸಾಮಾನ್ಯವಾಗಿದೆ. ಪಾದಚಾರಿಗಳು ಜಾರುವುದು ಸಾಮಾನ್ಯವಾಗಿದೆ.

ಅಧಿಕಾರಿಗಳು ಭೇಟಿ:ರಸ್ತೆ ಅವ್ಯವಸ್ಥೆ ಬಗ್ಗೆ ಬಡಾವಣೆಯ ಜನರು ನಗರಸಭೆ ಬಾಗಿಲು ತಟ್ಟುತ್ತಿದ್ದಾರೆ, ಅಧಿಕಾರಿ ವರ್ಗಕ್ಕೆ ಮೊರೆ ಇಡುತ್ತಿದ್ದಾರೆ. ಈ ಬಗ್ಗೆ ಗಮನಿಸಿದ ನಗರಸಭೆ ಅಧ್ಯಕ್ಷರಾದಿಯಾಗಿ ಆಯುಕ್ತರು ಹಾಗೂ ಇತರೆ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೆ ಶಾಶ್ವತ ಪರಿಹಾರ ಕಲ್ಪಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಎಂಬಂತ ಪರಿಸ್ಥಿತಿ ಇದೆ. ತಾತ್ಕಾಲಿಕ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಮಧ್ಯೆ ಸಾರ್ವಜನಿಕರು ರಸ್ತೆ ಅಪಘಾತಗಳಿಗೆ ಬೆಲೆ ತೆರುವಂತಾಗುತ್ತಿದೆ.

ಎಲೆಕ್ಷನ್ ಅಡ್ಡಿ:ಈ ಹಿಂದೆ ಈ ಬಡಾವಣೆಯಲ್ಲಿನ ರಸ್ತೆಗೆ ಡಾಂಬರೀಕರಣಕ್ಕಾಗಿ ಅನುದಾನ ಬಿಡುಗಡೆಯಾಗಿತ್ತು ಎನ್ನಲಾಗಿದೆ. ಆದರೆ ಈ ಮಧ್ಯೆ ಎದುರಾದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿಗೆ ತಡೆ ಬಿದ್ದಿತ್ತು. ನಂತರ ಚುನಾವಣೆ ನಡೆದು ಕಾಂಗ್ರೆಸ್‌ನಿಂದ ಶಾಸಕರಾಗಿ ಶರತ್‌ಬಚ್ಚೇಗೌಡ ಆಯ್ಕೆಯಾದರೂ ಆದರೆ ಈ ಹಿಂದೆ ಬಿಡುಗಡೆಯಾದ ಅನುದಾನ ಏನಾಯ್ತು ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಅನುದಾನ ನೀಡುತ್ತದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಾಲತಾಣಗಳಲ್ಲಿ ವೈರಲ್:ಕಳೆದೆರಡು ದಿನಗಳಿಂದ ಈ ರಸ್ತೆಯಲ್ಲಿ ಜಾರಿಬೀಳುವ ದೃಶ್ಯಗಳನ್ನು ಸೆರೆಹಿಡಿದಿರುವ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಶಾಸಕರಾದಿಯಾಗಿ ನಗರಸಭೆ ಆಯಕ್ತರು, ಅಧ್ಯಕ್ಷರಿಗೆ ಪೊಟೋ ಹಾಗೂ ವಿಡಿಯೋಗಳನ್ನು ಟ್ಯಾಗ್ ಮಾಡಿದ್ದಾರೆ. ಸಂಬಂಧಪಟ್ಟವರು ಶಾಶ್ವತ ಪರಿಹಾರ ಕಲ್ಪಿಸುವವರೇ ಎಂಬ ಆಶಾಭಾವನೆಯಿಂದ ಸ್ಥಳೀಯರು ಎದುರು ನೋಡುತ್ತಿದ್ದಾರೆ.

ನಿಸರ್ಗ ಬಡಾವಣೆಯಲ್ಲಿನ ರಸ್ತೆ ಅವ್ಯವಸ್ಥೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ರಸ್ತೆ ಡಾಂಬರೀಕರಣಕ್ಕೆ ಅನುದಾನ ಕೊರತೆ ಇದೆ. ಅನುದಾನ ಸಿಕ್ಕರೆ ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಪ್ರಸ್ತುತ ತಾತ್ಕಾಲಿಕ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ.

ನೀಲಲೋಚನ ಪ್ರಭು, ನಗರಸಭೆ ಆಯುಕ್ತ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net