

ಶಶಿ ಕುತ್ಯಾಳ ಪುತ್ತೂರು ಗ್ರಾಮಾಂತರ
ಒಳಮೊಗ್ರು ಗ್ರಾಮವ್ಯಾಪ್ತಿಯಲ್ಲಿ ಹಾದು ಹೋಗುವ ಅಜಲಡ್ಕ-ಶೇಖಮಲೆ ರಸ್ತೆ ಹೊಂಡಗುಂಡಿಗಳಿಂದ ತುಂಬಿ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀರಾ ಸಮಸ್ಯೆಯಾಗಿದೆ. ಈ ಸಂಪರ್ಕ ರಸ್ತೆಯ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರ್ಕಾರವನ್ನು ಅಣಕಿಸುವ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಜಲಡ್ಕ ಶೇಖಮಲೆ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಅಜಲಡ್ಕದಿಂದ ಮುಡಾಳದ ತನಕ 2 ಕಿ.ಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಜಲಡ್ಕದಿಂದ ನೀರ್ಪಾಡಿ ತನಕ ರಸ್ತೆ ಜಲ್ಲಿಕಲ್ಲುಗಳು ಸಂಪೂರ್ಣ ಎದ್ದು ಹೋಗಿ ದೊಡ್ಡ ಗಾತ್ರದ ಹೊಂಡ-ಗುಂಡಿಗಳಾಗಿವೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು, ಜೀವ ಭಯದೊಂದಿಗೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪಾದಾಚಾರಿಗಳ ಸಂಚಾರಕ್ಕೂ ಈ ರಸ್ತೆ ಅಯೋಗ್ಯವಾಗಿದೆ.
ದ್ವಿಚಕ್ರ ವಾಹನಗಳಲ್ಲಿ ತೆರಳುವವರು ಹಿಂಬದಿ ಸವಾರರನ್ನು ಅಲ್ಲಲ್ಲಿ ಇಳಿಸಿ, ಹತ್ತಿಸಿಕೊಂಡು ಹೋಗುವ ಅನಿವಾರ್ಯತೆ ಇಲ್ಲಿ ಕಾಣುತ್ತಿದೆ. ದಿನನಿತ್ಯ ಶಾಲಾ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುತ್ತಿರುವ ಮಂದಿ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಮಹಿಳೆಯರ ಬವಣೆ ಹೇಳತೀರದು. ಆದರೆ ಈ ಸಂಕಷ್ಟವನ್ನು ಯಾರಲ್ಲಿ ಹೇಳಿಕೊಳ್ಳೋದು ಎನ್ನುವುದು ಗ್ರಾಮಸ್ಥರ ಪ್ರಶ್ನೆ.
ಸಂಬಂಧಪಟ್ಟವರ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕೆಲವೊಂದು ಕಡೆಗಳಲ್ಲಿ ಸಾರ್ವಜನಿಕರು ಸೇರಿಕೊಂಡು ರಸ್ತೆ ಹೊಂಡಗಳಿಗೆ ಮಣ್ಣು ತುಂಬಿಸಿದ್ದಾರೆ. ಆದರೆ ಇದು ಪ್ರಯೋಜನಕ್ಕೆ ಬರುತ್ತಿಲ್ಲ.ರಸ್ತೆ ಕೆಸರುಮಯವಾಗಿ ದ್ವಿಚಕ್ರ ವಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ದುರಸ್ತಿಗಾಗಿ ಈಗಾಗಲೇ ಹಲವು ಬಾರಿ ಒಳಮೊಗ್ರು ಗ್ರಾಮ ಪಂಚಾಯಿತಿ ವತಿಯಿಂದ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಪ್ರಗತಿ ಶೂನ್ಯ.
15 ವರ್ಷಗಳ ಹಿಂದೆ ಈ ರಸ್ತೆಯ ಡಾಂಬರೀಕರಣ ನಡೆದಿತ್ತು. ಈ ನಂತರದಲ್ಲಿ ಶೇಖಮಲೆಯಿಂದ ಮುಡಾಳ ತನಕ ಮರು ಡಾಂಬರೀಕರಣವಾಗಿದ್ದು, ದರ್ಬೆತ್ತಡ್ಕದ ತನಕ ತೇಪೆ ಹಾಕುವ ಕೆಲಸ ಕೂಡ ಆಗಿದೆ. ಆದರೆ ಅಜಲಡ್ಕದಿಂದ ಮುಡಾಲ ತನಕದ ರಸ್ತೆಯ ಅಭಿವೃದ್ಧಿ ಕಾರ್ಯವಾಗಲಿ, ಕನಿಷ್ಟ ದುರಸ್ತಿ ಕಾರ್ಯವಾಗಲಿ ನಡೆದಿಲ್ಲ ಎನ್ನುವುದು ಗ್ರಾಮಸ್ಥರ ದೂರು.
ಉಪಯುಕ್ತ ಸಂಪರ್ಕ ಮಾರ್ಗ
ಅಜಲಡ್ಕ ಶೇಖಮಲೆ ರಸ್ತೆ ಹಲವು ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಪೆರ್ಲ, ಪಾಣಾಜೆ ಕಡೆಯವರು ರೆಂಜ ಮಾರ್ಗವಾಗಿ ನೇರವಾಗಿ ಈ ರಸ್ತೆಯ ಮೂಲಕ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಶೇಖಮಲೆಯಲ್ಲಿ ಸಂಪರ್ಕ ಪಡೆಯಬಹುದಾಗಿದೆ. ಉಕ್ಕುಡ, ಪುಣಚ, ಬುಳೇರಿಕಟ್ಟೆ, ಸಾಜ, ದೇವಸ್ಯ ಈ ಭಾಗದಿಂದ ಬರುವ ವಾಹನ ಸವಾರರು ಕೂಡ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಪಡೆಯಲು ಇದು ಹತ್ತಿರದ ಮಾರ್ಗವಾಗಿದೆ. ಉಪ್ಪಳಿಗೆ, ಅಜಲಡ್ಕ, ನೀರ್ಪಾಡಿ, ದರ್ಬೆತ್ತಡ್ಕ ಇತ್ಯಾದಿ ಭಾಗದ ಜನರಿಗೆ ಕುಂಬ್ರ ಪೇಟೆಗೆ ಬರಲು ಇದು ಬಹಳ ಹತ್ತಿರದ ರಸ್ತೆಯಾಗಿದೆ. ಜನರಿಗೆ ಉಪಯುಕ್ತ ರಸ್ತೆಯಾಗಿದ್ದರೂ, ರಸ್ತೆಯ ಅಭಿವೃದ್ಧಿಯ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನೋದು ಆ ಭಾಗದ ಮಂದಿಯ ಆರೋಪ.
ನಿಧಿ ಶೋಧಕ್ಕಾಗಿ ಹೊಂಡ ತೋಡಿದ ಸರ್ಕಾರ!
ಹದಗೆಟ್ಟಿರುವ ರಸ್ತೆಯ ದುರಸ್ತಿ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಅಜಲಡ್ಕದಲ್ಲಿ ಸರ್ಕಾರವನ್ನು ಅಣಕಿಸುವ ವ್ಯಂಗ್ಯದ ಒಕ್ಕಣೆಯುಳ್ಳ ಎಚ್ಚರಿಕೆಯ ಬ್ಯಾನರೊಂದನ್ನು ಅಳವಡಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ.‘ಯಾರೋ ಮಾಂತ್ರಿಕರು ಅಜಲಡ್ಕದಿಂದ ಮುಡಾಲವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿ ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ-ನಿಧಾನವಾಗಿ ಚಲಿಸಿ’ ಎಂದು ‘ಎಚ್ಚರಿಕೆಯ ಫಲಕ’ ಎಂಬ ತಲೆಬರಹವಿರುವ ಬ್ಯಾನರ್‌ನಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಕುರಿತು ಕೆಲ ತಿಂಗಳ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಾವು ಮನವಿ ಮಾಡಿದ್ದೇವೆ. ದುರಸ್ತಿ ಮಾಡಿಸಿ ಕೊಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ. ಅಜಲಡ್ಕದಿಂದ ಮುಡಾಳ ತನಕವಾದರೂ ಶೀಘ್ರ ದುರಸ್ತಿ ಕಾರ್ಯ ನಡೆಯಬೇಕು ಎನ್ನುವುದು ನಮ್ಮ ಆಗ್ರಹ. ಮಾಧವ ಅಜಲಡ್ಕ, ಉಪಾಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಜಲಡ್ಕದಿಂದ ನೀರ್ಪಾಡಿ ತನಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯಲ್ಲಿ ಹೊಂಡ-ಗುಂಡಿಗಳೇ ತುಂಬಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ತೇಪೆ ಕಾರ್ಯ ನಡೆಸಬೇಕು ಎನ್ನುವುದು ನಮ್ಮ ಆಗ್ರಹ. ಶಾಂತರಾಮ ರೈ ನೀರ್ಪಾಡಿ, ಪ್ರಗತಿಪರ ಕೃಷಿಕ https://www.vijayavani.net/arebhashe-literature-culture-camp https://www.vijayavani.net/dividend-distribution-in-narikambubu