

ಸರ್ಜಾಪುರ: ಆನೇಕಲ್ ತಾಲೂಕಿನ 28 ಗ್ರಾಮ ಪಂಚಾಯಿತಿಗಳ ಪೈಕಿ ಯಮರೆ ಪಂಚಾಯಿತಿ ಅತ್ಯಂತ ಸಿರಿವಂತ ಪಂಚಾಯಿತಿ ಎನಿಸಿದೆ. ಆದರೆ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿವೃದ್ಧಿಗೆ ತೀವ್ರ ಬಡತನ ಎದುರಿಸುವಂತಾಗಿದೆ.
ವಾರ್ಷಿಕ ಏಳೆಂಟು ಕೋಟಿ ರೂ.ವರಮಾನವಿದ್ದರೂ ಈ ಪಂಚಾಯಿತಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲೂ ಹಣವಿಲ್ಲ ಎಂಬಂತೆ ಪಂಚಾಯಿತಿ ಬಡತನ ಪ್ರದರ್ಶಿಸುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹದಗೆಟ್ಟ ರಸ್ತೆಗಳು, ಅನಿಧಿಕೃತ ಜಾಹಿರಾತುಗಳು, ಕೆರೆ ಒತ್ತುವರಿ ಸೇರಿ ಸಾಕಷ್ಟು ಸಮಸ್ಯೆಗಳನ್ನು ಹಾಸಿಹೊದ್ದು ಮಲಗಿದ್ದರೂ ಪಂಚಾಯಿತಿ ಜಾಣಮೌನ ಮುರಿಯುತ್ತಿಲ್ಲ.
ರೋಡ್ ಇಲ್ಲದೆ ಟ್ಯಾಕ್ಸ್ ಇಲ್ಲ: ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 8 ಗ್ರಾಮಗಳು ಒಳಪಟ್ಟಿವೆ,ಒಂದೆಡೆ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ಎದ್ದುನಿಲ್ಲುತ್ತಿದ್ದರೆ ಕನಿಷ್ಟ ರಸ್ತೆಗುಂಡಿಗಳನ್ನು ಮುಚ್ಚಲೂ ಸಾಧ್ಯವಾಗದ ಪರಿಸ್ಥಿತಿ ಕಾಣುತ್ತಿದೆ. ಇತ್ತೀಚಿಗೆ ನೂರಾರು ಸಂಖ್ಯೆಯಲ್ಲಿ ಅಪಾರ್ಟಮೆಂಟ್ ನಿವಾಸಿಗಳು ಸರ್ಜಾಪುರ-ಬೆಂಗಳೂರು ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ‘‘ರೋಡ್ ಇಲ್ಲದೇ ಟ್ಯಾಕ್ಸ್ ಇಲ್ಲ’ ಎಂಬಾ ಘೋಷಣೆ ಕೂಗಿ ಪ್ರತಿಭಟಿಸಿದ್ದರೂ ಪಂಚಾಯಿತಿ ಜಾಣ ಕುರುಡು ಪ್ರದರ್ಶಿಸುತ್ತಲೇ ಬಂದಿದೆ. ಚಂಬೇನಹಳ್ಳಿ ಗ್ರಾಮದಿಂದ ನೆರಿಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿದೆ, ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸಲು ಸರ್ಕಸ್ ಮಾಡುವಂತಾಗಿದೆ.
ಕೆರೆ ಒತ್ತುವರಿ: ಸೋಂಪುರ ಗ್ರಾಮಕ್ಕೆ ಸೇರಿದ ಕೆರೆ ಒಡಲನ್ನು ಬಗೆದು ಖಾಸಗಿ ಬಡವಣೆಗೆ ಸಾಗಲು ರಸ್ತೆಯನ್ನಾಗಿ ಮಾರ್ಪಡು ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾಗುವ ಕಂದಾಯ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ತುಕ್ಕು ಹಿಡಿದ ನಿಲ್ದಾಣ : ಇಲ್ಲಿನ ಕ್ರೀಸ್ಟಲ್ ಆಪಾರ್ಟಮೆಂಟ್ ಬಳಿಯಲ್ಲಿನ ಬಸ್ ತಂಗುದಾಣವು ಸಂಪೂರ್ಣವಾಗಿ ತುಕ್ಕು ಹಿಡಿದಿದೆ ಮತ್ತು ಮೇಲ್ಛಾವಣೆ ಕಿತ್ತುಹೋಗಿದೆ, ತಂಗುದಾಣದ ಸುತ್ತಲೂ ಗಿಡ-ಗಂಟೆಗಳು ಬೆಳೆದಿದ್ದು ವಿಷ ಜಂತುಗಳ ಆಶ್ರಯತಾಣವಾಗಿ ಮಾರ್ಪಟಿದೆ.
ಮಳೆ ಬಂದರೆ ಕೆರೆ: ಬಿ.ಹೊಸಹಳ್ಳಿ ರಸ್ತೆಯ ಸಂದೀಪನಿ ಶಾಲೆಯ ಮುಂಭಾಗದಲ್ಲಿ ಮಳೆಗಾಲದಲ್ಲಿ ರಸ್ತೆ ಜಲಾವೃತಗೊಳ್ಳುತ್ತದೆ, ರಸ್ತೆ ದಾಟಲು ಪಾದಚಾರಿಗಳು ಪರದಾಡುವಂತಾಗಿದೆ.
ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಗಳಿಗೆ ಅರ್ಜಿಗಳನ್ನು ರವಾನೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ದುರಸ್ತಿ ಕಾಮಾಗಾರಿಗಳ ಕ್ರಿಯಾ ಯೋಜನೆಯಡಿ ಚಂಬೇನಹಳ್ಳಿ, ನೆರಿಗಾ ಜಂಕ್ಷನ್‌ನಿಂದ ವಿ.ಕಲ್ಲಹಳ್ಳಿ ರಸ್ತೆಗೆ ಸುಮಾರು 1.62 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಅದು ಯಾವ ಹಂತದಲ್ಲಿ ಇದೆ ಎಂದು ಪರಿಶೀಲನೆ ನಡೆಸುತ್ತೇವೆ.
ಕೆ.ಕೆ ಪ್ರವೀಣ್ ಕುಮಾರ್, ಪಿಡಿಒ ಯಮರೆ ಪಂಚಾಯಿತಿ