

ಈಶ್ವರಮಂಗಲ: ಎರಡು ವಾರಗಳ ಹಿಂದಷ್ಟೇ ಡಾಂಬರು ಅಳವಡಿಸಲ್ಪಟ್ಟ ನಿಡ್ಪಳ್ಳಿ ಶಾಂತದುರ್ಗಾ ದೇವಾಲಯ ಸಂಪರ್ಕಿಸುವ ರಸ್ತೆಯ ದೇವಸ್ಯ ಭಾಗದಲ್ಲಿ ಜಲ್ಲಿ ಏಳಲಾರಂಭಿಸಿದ್ದು, ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಜನರಿಂದ ವ್ಯಕ್ತವಾಗಿದೆ.
ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಶಾಂತದುರ್ಗಾ ದೇವಾಲಯ ಸಂಪರ್ಕಿಸುವ ರಸ್ತೆಯ ದೇವಸ್ಯ ಏರು- ತಿರುವು ಭಾಗಕ್ಕೆ ಇತ್ತೀಚೆಗಷ್ಟೇ ಶಾಸಕರ 5 ಲಕ್ಷ ರೂ. ಅನುದಾನದಲ್ಲಿ ಡಾಂಬರು ಅಳವಡಿಸಲಾಗಿತ್ತು. ದೇವಸ್ಯ ತಿರುವು ಭಾಗದಲ್ಲಿ ರಸ್ತೆ ಹೊಂಡ ಬಿದ್ದು ವಾಹನ ಓಡಾಟ ಕಷ್ಟವಾಗುತ್ತಿದ್ದುದರಿಂದ ಇಲ್ಲಿ ಡಾಂಬರು ಅಳವಡಿಸಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದು ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ್ದರು.
ಲೋಡ್ ಲಾರಿಗಳ ಓಡಾಟದಿಂದ ಸಮಸ್ಯೆ: ಆದರೆ ಡಾಂಬರು ಅಳವಡಿಸಿ ಎರಡು ವಾರದಲ್ಲೇ ರಸ್ತೆಗೆ ಹಾಕಿದ್ದ ಜಲ್ಲಿ ಎದ್ದಿರುವುದರಿಂದ ಇಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ರಸ್ತೆ ಹೆಚ್ಚು ಕಾಲ ಬಾಳಿಕೆ ಬಾರದು ಎಂದು ಸಾರ್ವಜನಿಕರ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಮಗಾರಿ ಗುತ್ತಿಗೆದಾರ ರಫೀಕ್, ಇಲ್ಲಿ ಡಾಂಬರು ಮಾಡಲಾದ ಏರು ಭಾಗದಲ್ಲಿ ಲೋಡ್ ಹೇರಿಕೊಂಡು ಲಾರಿಗಳು ಚಲಿಸಿರುವ ಕಾರಣ ಸಮಸ್ಯೆಯಾಗಿದೆ. ಆ ಭಾಗದಲ್ಲಿ ಗುಣಮಟ್ಟದ ಡಾಂಬರು ಅಳವಡಿಸಿ ಸರಿಪಡಿಸಿಕೊಡಲಾಗುವುದು ಎಂದಿದ್ದಾರೆ.
ಶಾಂತದುರ್ಗಾ ದೇವಾಲಯ ಸಂಪರ್ಕಿಸುವ ರಸ್ತೆಯ ದೇವಸ್ಯ ಎಂಬಲ್ಲಿ ನಡೆದಿರುವ ರಸ್ತೆ ಡಾಂಬರು ಕಾಮಗಾರಿ ಮೇಲ್ನೋಟಕ್ಕೆ ಕಳಪೆ ಕಾಮಗಾರಿಯಂತೆ ಕಾಣುತ್ತಿದೆ. ಅದನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
-ರಾಧಾಕೃಷ್ಣ ಬೋರ್ಕರ್, ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷ