

ವಿನಯ್ ಉಪ್ಪಿನಂಗಡಿ
ರಾ.ಹೆ.75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಬಜತ್ತೂರು ಗ್ರಾಮದ ನೀರಕಟ್ಟೆ-ಬಾರಿಕೆ ಸಂಪರ್ಕ ಬೆಸೆಯುತ್ತಿದ್ದ ಕಾಲು ಸಂಕ (ಕಿರು ಸೇತುವೆ)ಯನ್ನು ಕಾಮಗಾರಿಯ ವೇಳೆ ಕಿತ್ತು ಹಾಕಲಾಗಿದೆ. ಕಾಮಗಾರಿ ನಿರತ ಸಂಸ್ಥೆ ಪರ್ಯಾಯ ವ್ಯವಸ್ಥೆ ಮಾಡದಿರುವ ಕಾರಣ 50 ಮನೆಗಳ ನಿವಾಸಿಗರು ದಿನನಿತ್ಯ ಅಪಾಯಕ್ಕೆ ಮೈಯೊಡ್ಡುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ನೀರಕಟ್ಟೆಯಿಂದ ಬಾರಿಕೆಗೆ ಹೋಗುವ ರಸ್ತೆಗೆ ಹೆದ್ದಾರಿ ಬದಿಯ ತೋಡಿನಿಂದ ಸಂಪರ್ಕ ಸಾಧಿಸಲು ಈ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿದ್ದು, ಜನತೆ ಅದನ್ನು ನಿತ್ಯ ಬಳಸುತ್ತಿದ್ದರು. ಹೆದ್ದಾರಿ ಅಗಲೀಕರಣಕ್ಕೆ ಈ ಸೇತುವೆ ಇದ್ದ ಸ್ಥಳವೂ ಒಳಪಟ್ಟಿದ್ದರಿಂದ ಸೇತುವೆ ಕಿತ್ತು ಹಾಕಲಾಗಿತ್ತು.
ಈ ವೇಳೆ ರಸ್ತೆಯನ್ನು ಬಳಸುತ್ತಿದ್ದ ಬಾರಿಕೆಯ ನಿವಾಸಿಗರು ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಏನೆಂದು ಪ್ರಶ್ನಿಸಿದಾಗ ಹೆದ್ದಾರಿ ಬದಿಯ ತಡೆಗೋಡೆ ನಿರ್ಮಿಸಲಾದ ಬಳಿಕ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡಲಾಗಿತ್ತು. ಈ ಭರವಸೆಯನ್ನು ನಂಬಿದ ಜನ ಅಭಿವೃದ್ಧಿ ಕಾರ್ಯಕ್ಕಾಗಿ ಒಂದಷ್ಟು ದಿನ ಸಮಸ್ಯೆಗೆ ತುತ್ತಾಗುವುದರಲ್ಲಿ ನ್ಯಾಯವಿದೆ ಎಂದು ಭಾವಿಸಿ ಸುಮ್ಮನಿದ್ದರು. ಆದರೆ ಒಂದಷ್ಟು ದಿನ ಎನ್ನುವುದು ತಿಂಗಳುಗಟ್ಟಲೆ ಕ್ರಮಿಸಿದಾಗ ಅಲ್ಲಿನ ನಿವಾಸಿಗರು ಆಕ್ರೋಶಗೊಂಡು, ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಾಲು ಸಾಲು ಮನವಿಗಳನ್ನು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ನೀಡಿದಾಗ ಅಸ್ಪಷ್ಟ ಭರವಸೆಗಳು ಮಾತ್ರ ಲಭಿಸಿದವು. ಪಂಚಾಯಿತಿ ಆಡಳಿತಕ್ಕೆ ಲಿಖಿತ ಮನವಿ ಸಲ್ಲಿಸಿದಾಗ ತೆರವುಗೊಳಿಸಲಾದ ಕಿರು ಸೇತುವೆಗೆ ಹೆದ್ದಾರಿ ಇಲಾಖೆ ಪಂಚಾಯಿತಿ ಆಡಳಿತಕ್ಕೆ ಯಾವುದೇ ಪರಿಹಾರ ಧನ ನೀಡದೆ ಇರುವುದರಿಂದ ಬಾರಿಕೆ ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಹೊಣೆಗಾರಿಕೆಯು ಹೆದ್ದಾರಿ ಇಲಾಖೆಯದ್ದೇ ಆಗಿದೆ ಎಂದು ವಾದಿಸಿ ಸಮರ್ಪಕ ಕಿರು ಸೇತುವೆಯನ್ನು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಪಂಚಾಯಿತಿ ನಿರ್ಣಯ, ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಗೆ ಲಭಿಸುತ್ತಿದ್ದ ಭರವಸೆಗಳು ಎಲ್ಲವೂ ಕಾರ್ಯಾನುಷ್ಠಾನವಾಗದೆ ಜನರ ಸಮಸ್ಯೆ ನಿರಂತರ ಎನ್ನುವಂತಾಗಿದೆ. ಈ ಮಧ್ಯೆ ಹೆದ್ದಾರಿ ಮತ್ತು ಬಾರಿಕೆ ರಸ್ತೆಯ ಕಡಿಯಲ್ಪಟ್ಟ ಸ್ಥಳಕ್ಕೆ ಮಣ್ಣು ತಂದು ಹಾಕಲಾಗಿದೆಯಾದರೂ ಅದನ್ನು ಸಮರ್ಪಕವಾಗಿ ಹೊಂದಿಸದ ಕಾರಣ ಪರಿಸರದ ಜನತೆ ಮಣ್ಣ ರಾಶಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿರುವ ದೃಶ್ಯ ಕಾಣುತ್ತಿರುತ್ತದೆ.
ಕಾಮಗಾರಿಗೆ ಎಲ್ಲ ಬಗೆಯ ಸಹಕಾರ ನೀಡಿದೆವು. ಬಾರಿಕೆ ಪ್ರದೇಶದ ಸಂಪರ್ಕ ರಸ್ತೆಯನ್ನು ಹೆದ್ದಾರಿಗೆ ಜೋಡಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸತತ ಮನವಿಯೂ ನಿರ್ಲಕ್ಷೃಕ್ಕೆ ತುತ್ತಾಗಿದೆ. ಕಂಡ ಕಂಡ ಅಧಿಕಾರಿಗಳನ್ನೆಲ್ಲಾ ಕಾಡಿಬೇಡಿಯಾಗಿದೆ. ಯಾರಿಂದಲೂ ಸ್ಪಂದನೆಯಿಲ್ಲ. ದಿನ ನಿತ್ಯ ಜೀವವನ್ನು ಅಪಾಯಕ್ಕೊಡ್ಡಿ ಈ ಭಾಗದಲ್ಲಿ ನಡೆದಾಡಬೇಕಾದ ದುಸ್ಥಿತಿ ನಮ್ಮದಾಗಿದೆ. ಸಹನೆಗೂ ಒಂದು ಮಿತಿ ಇದೆ. ಒಂದು ವಾರದ ಗಡುವು ನೀಡಲಾಗುವುದು. ಬಳಿಕ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ತೀವ್ರ ತರಹದ ಪ್ರತಿಭಟನೆ ನಡೆಸಲಾಗುವುದು. - ಕಿಶೋರ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹೆದ್ದಾರಿ ಅಗಲೀಕರಣ ಕಾಮಗಾರಿಯ ಕಾರಣಕ್ಕೆ ಗ್ರಾಮದ ಹಲವೆಡೆ ಸಮಸ್ಯೆಗಳು ಕಾಣಿಸಿವೆ. ಕೆಲವೊಂದು ಬಗೆಹರಿಸಿದ್ದಾರೆ. ನೀರಕಟ್ಟೆ-ಬಾರಿಕೆ ಸಂಪರ್ಕ ಸೇತುವೆಯ ವಿಚಾರದಲ್ಲಿ ಹೆದ್ದಾರಿ ಇಲಾಖಾಧಿಕಾರಿಗಳು ಕ್ರಿಯಾಯೋಜನೆ ಸಿದ್ಧವಾಗಿದೆ ಎಂದೂ, ಆ ಭಾಗದ ಅಗತ್ಯ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ಕಿರು ಸೇತುವೆ ನಿರ್ಮಿಸಲಾಗುವುದೆಂದು ಹೇಳುತ್ತಾ ಬಂದಿದ್ದಾರೆ. ಈಗ ಮಳೆಗಾಲದಲ್ಲಿ ಅಲ್ಲಿನ ಜನಕ್ಕೆ ಸಮಸ್ಯೆಯಾಗುತ್ತಿದೆ. ಪಂಚಾಯಿತಿ ಆಡಳಿತದಿಂದ ನಮಗೆ ಏನನ್ನೂ ಮಾಡಲಾಗುತ್ತಿಲ್ಲ. ಶಾಸಕ, ಸಂಸದರಾದಿಯಾಗಿ ಎಲ್ಲರಿಂದಲೂ ಒತ್ತಡ ತರಿಸಲಾಯಿತು. ಅಧಿಕಾರಿಗಳು ಮಾತ್ರ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದಾರೆ. - ಗಂಗಾಧರ ಪಿ.ಎನ್., ಗ್ರಾಪಂ ಅಧ್ಯಕ್ಷ