

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯಿಂದ ಗುರಿಪಳ್ಳ ಇಂದಬೆಟ್ಟು ಸಂಪರ್ಕಿಸುವ ರಸ್ತೆಯ ಅಂಬಡಬೆಟ್ಟು ಎಂಬಲ್ಲಿ ಕಿರು ಸೇತುವೆಯೊಂದು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಶುಕ್ರವಾರ ಕೆಎಸ್ಸಾರ್ಟಿಸಿ ಅಧಿಕಾರಿಗಳು ಗುರಿಪಳ್ಳಕ್ಕೆ ಆಗಮಿಸಿ ಪರ್ಯಾಯ ಮಾರ್ಗದ ಪರಿಶೀಲನೆ ನಡೆಸಿದರು.
ರಸ್ತೆಯ ಮೂಲಕ ದಿನನಿತ್ಯ 300ಕ್ಕೂ ಅಧಿಕ ಶಾಲಾ ಮಕ್ಕಳು ಹಾಗೂ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಇವರೆಲ್ಲರೂ ಸರ್ಕಾರಿ ಬಸ್ಸನ್ನು ಅವಲಂಬಿಸಿದ್ದರು. ಸದ್ಯ ಬಸ್ ಇಲ್ಲದೇ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ, ಕಾರ್ಮಿಕರ ಪ್ರಯಾಣಿಕರ ಸಮಸ್ಯೆ ಬಗೆಹರಿಸುವಂತೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ರಕ್ಷಿತ್ ಶಿವರಾಂ ಕ.ರಾ.ರ.ಸಾ.ನಿಗಮದ ಜಿಲ್ಲಾಧಿಕಾರಿಗೆ ಕರೆ ಮಾಡಿ ಪರ್ಯಾಯ ರಸ್ತೆಯ ಮೂಲಕ ಗುರಿಪಳ್ಳ ಇಂದಬೆಟ್ಟುವಿಗೆ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ಇಲಾಖೆಯ ಅಧಿಕಾರಿಗಳನ್ನು ಮಾರ್ಗ ವೀಕ್ಷಣೆಗೆ ಕಳುಹಿಸಿದ್ದು, ಶುಕ್ರವಾರ ಧರ್ಮಸ್ಥಳ ಘಟಕದ ವ್ಯವಸ್ಥಾಪಕರು ಹಾಗೂ ಇಲಾಖೆಅಧಿಕಾರಿಗಳು ರಸ್ತೆ ವೀಕ್ಷಣೆಗಾಗಿ ಗುರಿಪಳ್ಳಕ್ಕೆ ಭೇಟಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಶೋಧರ ಗೌಡ ಕೊಡ್ಡೋಲು, ಪ್ರಮುಖರಾದ ನಾಣ್ಯಪ್ಪ ಪೂಜಾರಿ ಗೋಳಿದೊಟ್ಟು, ರಾಧಾಕೃಷ್ಣ ಶರ್ಮಾ ಗುರಿಪಳ್ಳ, ಯುವ ಕಾಂಗ್ರೆಸ್‌ನ ಗುರುರಾಜ್ ಗುರಿಪಳ್ಳ, ಪ್ರಸಾದ್ ಕುಮಾರ್ ಹಾಗೂ ಊರವರು ಉಪಸ್ಥಿತರಿದ್ದರು.
ಸರ್ಕಾರಿ ಬಸ್ ಉಜಿರೆ- ಸೋಮಂತಡ್ಕ ಮಾರ್ಗವಾಗಿ ಕಾನರ್ಪ- ಬೊಳ್ಳೂರು ಇಂದಬೆಟ್ಟು ಮೂಲಕ ಗುರಿಪಳ್ಳಕ್ಕೆ ಆಗಮಿಸುತ್ತಿದೆ.