

ಬೆಳಗಾವಿ: ಮಳೆಯಿಂದಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಹಾಗೂ ಮುಖ್ಯರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಈ ಬಗ್ಗೆ ಸಚಿವರು, ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿ ವಿನಾಯಕ ನಗರ ಸೇರಿ ವಿವಿಧ ಕಡೆ ನಿವಾಸಿಗಳು ಹಿಂಡಲಗಾ ಗಣಪತಿ ದೇವಸ್ಥಾನದ ಹತ್ತಿರ ಬಿದ್ದಿರುವ ಗುಂಡಿಗಳಲ್ಲಿ ಬಾಳೆ, ಟೆಂಗಿನ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಕಳೆದ ನಾಲ್ಕೈದು ವರ್ಷಗಳಿಂದ ಜನವಸತಿ, ಮಾರುಕಟ್ಟೆಯ ಮುಖ್ಯರಸ್ತೆಗಳನ್ನು ಡಾಂಬರೀಕರಣ ಮಾಡಿದ್ದು ಬಿಟ್ಟರೆ ನಂತರ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಇದರ ಪರಿಣಾಮ ಮಳೆಗಾಲದಲ್ಲಿ ಗುಂಡಿಬಿದ್ದ ರಸ್ತೆಗಳಲ್ಲಿಯೇ ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪಾಲಿಕೆ ಸದಸ್ಯರು, ಅಧಿಕಾರಿಗಳು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಕಳೆದ ಒಂದು ವಾರದಿಂದ ನಗರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಒಂದೆಡೆ ಚರಂಡಿಗಳು ತುಂಬಿ ರಸ್ತೆಯ ಮೇಲೆ ಹರಿಯುತ್ತಿದೆ. ರಸ್ತೆ ದುರಸ್ತಿ ಮಾಡಿದಾಗ, ಆ ಗುಂಡಿಗಳನ್ನು ಮುಚ್ಚದೇ ಹಾಗೆ ಬಿಟ್ಟಿದ್ದರ ಪರಿಣಾಮವಾಗಿ ಇದೀಗ ಮಳೆ ನೀರು ಆ ಗುಂಡಿಗಳಲ್ಲಿ ನಿಂತು ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಯಲ್ಲೇ ತ್ಯಾಜ್ಯ: ಎಲ್ಲೆಂದರಲ್ಲಿ ಅಂಗಡಿಕಾರರು, ವ್ಯಾಪಾರಿಗಳು ಹಸಿ ತ್ಯಾಜ್ಯ, ಮಾಂಸದ ತ್ಯಾಜ್ಯ ಎಸೆಯುತ್ತಿರುವ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳು ಗಬ್ಬೆದ್ದು ನಾರುತ್ತಿವೆ. ರಸ್ತೆಯ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಸಮರ್ಪಕ ರಸ್ತೆ ನಿರ್ಮಾಣ ಮಾಡಿ ಜನರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ನಗರದ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಮಳೆ ನಿಂತ ಬಳಿಕ ದುರಸ್ತಿ ಕಾಮಗಾರಿಗಳು ಆರಂಭಗೊಳ್ಳಲಿವೆ. | ಅಶೋಕ ದುಡಗುಂಟಿ ಪಾಲಿಕೆ ಆಯುಕ್ತ ಈಗಾಗಲೇ ಪಾಲಿಕೆ ವತಿಯಿಂದ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿದ್ದರೂ ಕಾಮಗಾರಿಗಳು ಆರಂಭಗೊಂಡಿಲ್ಲ. ಪಾಲಿಕೆ ಸದಸ್ಯರು, ಅಧಿಕಾರಿಗಳ ನಡುವಿನ ಕಿತ್ತಾಟದಿಂದ ಎಲ್ಲ ಕಾಮಗಾರಿಗಳು ಅರ್ಧಕ್ಕೆ ಮೊಟಕುಗೊಂಡಿವೆ. ಇದರಿಂದಾಗಿ ಹಾಳಾಗಿರುವ ರಸ್ತೆಯಲ್ಲಿ ಜನರು ಓಡಾಡಬೇಕಾಗಿದೆ. ಗುಂಡಿಯಲ್ಲಿ ವಾಹನ ಸವಾರರು ಬಿದ್ದು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಪಾಲಿಕೆ ಮಾತ್ರ ಎಚ್ಚೆತ್ತುಕೊಂಡಿಲ್ಲ. | ರವಿ ಪಾಟೀಲ, ಶಿವಾಜಿ ಅನಗೋಳಕರ, ನಾಗರಿಕರು