

ಶಿರಸಿ: ಶಿರಸಿ-ಹುಬ್ಬಳ್ಳಿ ರಸ್ತೆಯ ಚಿಪಗಿ ಸಮೀಪ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಹೊಂಡಗಳನ್ನು ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಶನಿವಾರ ಮುಚ್ಚಲಾಯಿತು. ಪಟ್ಟಣವನ್ನು ಸಂಪರ್ಕಿಸುವ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳು ಗುಂಡಿಮಯವಾಗಿರುವ ಕುರಿತು ‘ಸತತ ಮಳೆಗೆ ರಸ್ತೆ ತುಂಬ ಹೊಂಡ- ವಾಹನ ಚಾಲನೆ ಸವಾಲು’ ಎಂಬ ಶೀರ್ಷಿಕೆಯಡಿ ಜುಲೈ 28ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳ ಗಮನಕ್ಕೆ ತಂದರೂ ಗುಂಡಿ ಮುಚ್ಚಿಸಲು ಸೂಚಿಸಿದ್ದರೂ, ಕಾರ್ಯವಾಗಿರಲಿಲ್ಲ. ಹೀಗಾಗಿ, ಶನಿವಾರ ಶಾಸಕರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಹೊಂಡಗಳನ್ನು ಮುಚ್ಚಿಸುವ ಕಾರ್ಯ ಮಾಡಿದ್ದಾರೆ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸಹ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಸಹಕಾರ ನೀಡಿದರು. ಗಣೇಶ ದಾವಣಗೆರೆ, ಈರಪ್ಪ ನಾಯ್ಕ, ಮಹೇಶ್ ಶೆಟ್ಟಿ, ವಿವೇಕ ಪೂಜಾರಿ ಇತರರಿದ್ದರು.