ಕಳಪೆ ಕಾಮಗಾರಿ ಬಂಡವಾಳ ಬಯಲು! ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆ ಹೊಂಡಗಳು

road
ಅರಮನೆ ಬಾಗಿಲು ದ್ವಾರದ ಬಳಿ ರಸ್ತೆಯಲ್ಲಿ ಹೊಂಡಗಳು ಹೆಚ್ಚಾಗುತ್ತಿದೆ
Published on

ಯಶೋಧರ ವಿ.ಬಂಗೇರ, ಮೂಡುಬಿದಿರೆ

ಸತತ ಮಳೆಯಿಂದಾಗಿ ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ನಡೆದ ಕಳಪೆ ಕಾಮಗಾರಿಗಳ ಬಂಡವಾಳ ಬಯಲಾಗಿದೆ. ಈಗಲೇ ಕೆಲವು ತಿಂಗಳ ಹಿಂದೆಯಷ್ಟೇ ನಡೆದ ರಸ್ತೆ ಕಾಮಗಾರಿಗಳು ಎಷ್ಟು ಕಳಪೆಯಾಗಿದೆ ಎಂಬುದು ಸಾಕ್ಷಿ ಸಮೇತ ಕಣ್ಣಮುಂದಿವೆ. ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಸ್ವರಾಜ್ಯ ಮೈದಾನದ ಬಳಿ, ಮಿಶ್ರಾ ಪೇಡಾ ಅಂಗಡಿ ಬದಿಯ ರಸ್ತೆಯ ಬಾಕ್ಸ್ ಚರಂಡಿ ಕಾಮಗಾರಿ ಕಳೆದ ಬೇಸಗೆಯಲ್ಲಿ ಪ್ರಾರಂಭಗೊಂಡಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಂಡ ಕೆಲಸವೂ ಕಳಪೆಯಾಗಿದ್ದು, ಸ್ಥಳೀಯರು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಮೂಡುಬಿದಿರೆ ಕೇಂದ್ರ ಸ್ಥಳದಿಂದ ಸುಮಾರು 400 ಮೀ. ಅಂತರವಿರುವ ಈ ಪ್ರದೇಶದಲ್ಲಿ ಐದು ವಸತಿ ಸಮುಚ್ಛಯಗಳು, ಹತ್ತಕ್ಕೂ ಅಧಿಕ ಮನೆಗಳಿವೆ. ದಿನಾಲೂ ನೂರಾರು ಮಂದಿ ಓಡಾಡುತ್ತಾರೆ. ಕಾರು, ದ್ವಿಚಕ್ರ ವಾಹನಗಳು, ಶಾಲಾ - ಕಾಲೇಜು ಬಸ್‌ಗಳು ಈ ಪ್ರದೇಶದಲ್ಲಿ ಓಡಾಡುತ್ತಿರುತ್ತವೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಚರಂಡಿಯ ಬದಿಗೆ ಬರುವ ಕಾರುಗಳು, ಸಿಮೆಂಟ್ ಸ್ಲ್ಯಾಬ್ ಗಳಿಗೆ ಹೂತು ಹೋಗಿ ಜಖಂಗೊಂಡಿರುವ ಹಲವು ಘಟನೆಗಳು ಇಲ್ಲಿ ನಡೆದಿವೆ. ದ್ವಿಚಕ್ರ ವಾಹನಗಳು ಕೂಡ ಚರಂಡಿಯೊಳಗೆ ಬಿದ್ದಿವೆ. ಸ್ಥಳೀಯರು ಈ ಕುರಿತು ಪುರಸಭೆಗೆ ಮಾಹಿತಿ ನೀಡಿದರೂ, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಈ ಕುರಿತು ಪೋಸ್ಟ್ ಹಾಕಿದ್ದರೂ, ಪುರಸಭೆ ಆಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಪುರಸಭೆಯ ಈ ಕಳಪೆ ಕಾಮಗಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೂ ಅಪಾಯಕಾರಿಯಾಗಿ ಅವಘಡಗಳಿಗೆ ಆಹ್ವಾನ ನೀಡುತ್ತಿದೆ.

ರೂಪ ಕಳೆದುಕೊಂಡ ಮಾಸ್ತಿಕಟ್ಟೆ-ವಿದ್ಯಾಗಿರಿ ರಸ್ತೆ

ಮಾಸ್ತಿಕಟ್ಟೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯೊಂದಿಗೆ ವಿದ್ಯಾಗಿರಿ ಜಂಕ್ಷನ್‌ನಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಂಡ, ಕಲ್ಲುಮಣ್ಣು ತುಂಬಿಕೊಳ್ಳುತ್ತಿದೆ. ವಿದ್ಯಾಗಿರಿ ಜಂಕ್ಷನ್ ಸಮೀಪದಲ್ಲೇ ಈ ರಸ್ತೆಯಲ್ಲಿ ಅಡ್ಡವಾಗಿ ಟೆಲಿಕಾಂ ತಂತಿಗಳ ಅಳವಡಿಕೆಗೆ ಹೊಂಡ ಮಾಡಿ ಬಳಿಕ ಕಾಂಕ್ರೀಟು ಅಳವಡಿಸಲಾಗಿತ್ತು. ಆದರೆ ಮಳೆಗಾಲ ಪ್ರಾರಂಭವಾದ ಕೂಡಲೇ ಇದು ಕಳಚಿಕೊಂಡಿದೆ. ಪರಿಣಾಮ ಈಗ ರಸ್ತೆಯಲ್ಲಿ ಅಡ್ಡವಾಗಿ ಎರಡು ಕಡೆ ಹೊಂಡವಾಗಿದೆ. ಮಳೆಗೆ ನೀರು ರಭಸವಾಗಿ ಹರಿಯುವುದರಿಂದ ಹೊಂಡ ಆಳ ಹೆಚ್ಚಾಗುತ್ತಿದೆ. ದೂರದಲ್ಲಿ ಬರುವಾಗ ವಾಹನ ಚಾಲಕರಿಗೆ ಹೊಂಡ ಕಾಣಿಸದಿರುವುದರಿಂದ ಅಪಘಾತಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಅಲ್ಲೇ ಇಕ್ಕೆಲಗಳ ಅಂಚಿನಲ್ಲಿ ರಸ್ತೆ ಕುಸಿಯುತ್ತಿದೆ. ಡಾಂಬರು ನೆಲಕಚ್ಚುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಣ್ಣಿನ ರಸ್ತೆಯಾಗಿ ರೂಪ ಪಡೆಯುವ ಸ್ಥಿತಿಯಲ್ಲಿದೆ.

ಸ್ವಲ್ಪಮುಂದೆ ಹೋದಾಗ ಓಶಿಯನ್ ಡಿವ್ ವಸತಿ ಸಮುಚ್ಚಯದ ಎದುರು ಹೊಂಡಗಳು ಹೆಚ್ಚಾಗಿವೆ. ಕೇವಲ 10 ನಿಮಿಷ ರಭಸದಲ್ಲಿ ಮಳೆ ಬಂದರೆ ರಸ್ತೆ ಹಳ್ಳವಾಗಿ ಪರಿವರ್ತನೆಯಾಗುತ್ತದೆ. ರಸ್ತೆಯುದ್ದಕ್ಕೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಕಾರಣ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಇದು ಇಲ್ಲಿನ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಐತಿಹಾಸಿಕ ಸ್ಮಾರಕದೆದುರು ಹಳ್ಳ

ಚೌಟರ ಅರಮನೆಯ ಸಮೀಪ ಐತಿಹಾಸಿಕ ಅರಮನೆ ಬಾಗಿಲು ದ್ವಾರದ ಬದಿಯಲ್ಲಿ ಡಾಂಬರು ಕಿತ್ತು ಹೋಗಿದ್ದು, ಹೊಂಡ ಹಿರಿದಾಗುತ್ತಿದೆ. ರಸ್ತೆಯ ಬದಿಯಲ್ಲೇ ದ್ವಾರವಿರುವುದರಿಂದ ಹೊಂಡಗಳು ಕಾಣುವುದಿಲ್ಲ. ಅರಮನೆ ಬಾಗಿಲು-ಉಳಿಯ ಒಳರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಉಳಿಯ ಸಮೀಪ ಸುಮಾರು 80 ಮೀಟರ್ ರಸ್ತೆ, ಡಾಂಬರು ಕಳಚಿಕೊಂಡು ಸಂಪೂರ್ಣ ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿದೆ. ಹೊಂಡಗಳು ಹೆಚ್ಚಾಗಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಅಲಂಗಾರು ಜಂಕ್ಷನ್, ಅಲ್ಲೇ ಸಮೀಪದಲ್ಲಿರುವ ಕೊಡ್ಯಡ್ಕ ದೇವಸ್ಥಾನದ ದ್ವಾರವಿರುವ ಸ್ಥಳದಲ್ಲೂ ಡಾಂಬರು ಕಳಚಿ, ಹೊಂಡವಾಗಿದೆ. ಮಳೆಗೆ ರಸ್ತೆ ಹಳ್ಳವಾಗುತ್ತಿದೆ. ಇವು ಕೆಲವು ನಿದರ್ಶನಗಳಷ್ಟೇ. ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ ಹಲವಾರು ಕಡೆ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟು ಪ್ರಯಾಣಕ್ಕೆ ಅಯೋಗ್ಯವಾಗಿವೆ. ಈ ಬಗ್ಗೆ ಮೂಡುಬಿದಿರೆ ಪುರಸಭೆ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಅವಘಡಗಳು ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸ್ವರಾಜ್ಯ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆ ಪರಿಸರದಲ್ಲಿರುವ ಹೊಂಡಗಳನ್ನು ಮುಚ್ಚಲು ಪ್ರಾರಂಭಿಸಿದ್ದೇವೆ. ಮಳೆ ಕಡಿಮೆಯಾದ ತಕ್ಷಣ ಪುರಸಭೆ ವ್ಯಾಪ್ತಿಯ ಇತರ ಕಡೆಗಳಲ್ಲಿರುವ ಹೊಂಡಗಳನ್ನು ಮುಚ್ಚುವ ಕೆಲಸವಾಗುತ್ತದೆ.-ಇಂದು ಎಂ, ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net