

ಹಾರೂಗೇರಿ: ಕ್ರಾಸ್‌ನಿಂದ ಜಮಖಂಡಿಗೆ ಹೋಗುವ ಮುಖ್ಯ ರಸ್ತೆಯ ಮೇಲೆ ಮಳೆ ನೀರು ನಿಂತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಈ ಮಾರ್ಗದಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜತೆಗೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ವೃದ್ಧರು, ನಿತ್ಯವೂ ಈ ರಸ್ತೆಯ ಮೂಲಕವೇ ಸಂಚರಿಸುತ್ತಾರೆ. ಮಳೆ ಬಂದರೆ ಸಾಕು ರಸ್ತೆ ಮೇಲೆ ನೀರು ಸಂಗ್ರಹವಾಗಿ, ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ.
ಬೈಕ್ ಸವಾರರು ಸಂಚರಿಸುವಾಗ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೆ ಬೀಳುತ್ತಿರುವುದು ಸಾಮಾನ್ಯವಾಗಿದೆ. ಈ ರಸ್ತೆಯಲ್ಲಿ ಆತಂಕದಲ್ಲೇ ಸಾಗುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಹಾಗೂ ಗುಂಡಿ ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.