

ಗುತ್ತಲ: ಪಟ್ಟಣದ ಗೋಕಟ್ಟಿ ಹಿಂಭಾಗದ ಕಲಾಲರ ಪ್ಲಾಟ್‌ಗೆ ಹೊಂದಿಕೊಂಡ ದಂಡಿನ ದಾರಿ ಮಳೆಗೆ ಹದಗೆಟ್ಟಿದ್ದು, ನಿತ್ಯ ರೈತರು ಹಾಗೂ ಜಾನುವಾರು ಜಮೀನುಗಳಿಗೆ ತೆರಳಲು ಸಂಕಷ್ಟ ಎದುರಾಗಿದೆ.
ಪಟ್ಟಣದ ಪ್ರಮುಖ ರೈತ ಸಂಪರ್ಕ ರಸ್ತೆಗಳಲ್ಲಿ ದಂಡಿನ ದಾರಿಯೂ ಒಂದಾಗಿದೆ. 2011-12ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಈ ದಾರಿ ಅಭಿವೃದ್ಧಿಪಡಿಸಿದ್ದನ್ನು ಬಿಟ್ಟರೆ ಇಲ್ಲಿಯವರೆಗೂ ರಸ್ತೆ ಸುಧಾರಣೆ ಮಾಡಿಲ್ಲ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ತೆಗೆದುಕೊಂಡು ಹೋಗಲು ಹಾಗೂ ಫಸಲನ್ನು ಮರಳಿ ತರುವುದಕ್ಕೆ ರೈತರು ಕಷ್ಟಪಡಬೇಕಾಗಿದೆ. ಈ ರಸ್ತೆಯ ಕಲಾಲರ ಪ್ಲಾಟ್‌ನಿಂದ ಸುಮಾರು 1.5 ಕಿ.ಮೀ.ವರೆಗೆ ಕೆಸರಿನಿಂದ ಕೂಡಿದ್ದು, ಚಕ್ಕಡಿಗಳು, ಟ್ರ್ಯಾಕ್ಟರ್‌ಗಳು ಸಿಲುಕಿಕೊಂಡ ಘಟನೆ ನಡೆದಿದೆ.
ರಸ್ತೆ ಪರಿಶೀಲನೆ: ಈ ರಸ್ತೆಗೆ ಹೊಂದಿಕೊಂಡು ತುಂಗಾ ಮೇಲ್ದಂಡೆ ಕಾಲುವೆ ಇದೆ. ಕಾಲುವೆಯ ನೀರು ರಸ್ತೆಗೆ ಹರಿಯುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರ್ ವಿ.ದೇವರಾಜ ಹಾಗೂ ಸಹಾಯಕ ಇಂಜನಿಯರ್ ರಾಮಕೃಷ್ಣ ಕೆ. ಅವರು ರಸ್ತೆ ಪರಿಶೀಲನೆ ನಡೆಸಿ, ರೈತರೊಂದಿಗೆ ಸಮಾಲೋಚಿಸಿದರು.
ದಂಡಿನ ದಾರಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನುದಾನ ಲಭ್ಯತೆ ಹಾಗೂ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ರಾಜಣ್ಣ ಬೆನ್ನೂರ, ಚನ್ನಪ್ಪ ಕಲಾಲ, ರುದ್ರಪ್ಪ ಹಾದಿಮನಿ, ಸುಭಾಸ ಮೈಲಾರ, ಈರಣ್ಣ ಕೆಂಚಮಲ್ಲ, ಕಾಳಿಂಗಪ್ಪ ಹೊಳಲ, ಮೃತ್ಯುಂಜಯ ಬುಕ್ಕಶೆಟ್ಟಿ, ಅಜ್ಜಪ್ಪ ರೊಟ್ಟಿ, ಅಜ್ಜಪ್ಪ ಗಿರಿಯಪ್ಪನವರ, ಈರಣ್ಣ ಕಬ್ಬಿಣದ, ಈರಣ್ಣ ಅಂಗಡಿ, ಅಜುಬ ಹಾವನೂರ, ನಾಗರಾಜ ಗಂಗಣ್ಣನವರ, ಶಿವಪ್ಪ ಅಂಗಡಿ, ಮಲ್ಲೇಶ ಅಂಗಡಿ ಇತರರಿದ್ದರು.
ಗುತ್ತಲದ ದಂಡಿನ ದಾರಿ ಅಭಿವೃದ್ಧಿಪಡಿಸುವಂತೆ ರೈತರು ಮನವಿ ಮಾಡಿದ್ದಾರೆ. ಅಗತ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ತುಂಗಾ ಮೇಲ್ದಂಡೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ದಂಡಿನ ದಾರಿ ಅಭಿವೃದ್ಧಿಪಡಿಸಲಾಗುವುದು.I ರುದ್ರಪ್ಪ ಲಮಾಣಿ, ಉಪ ಸಭಾಧ್ಯಕ್ಷ, ಶಾಸಕ ಹಾವೇರಿ