

ರಾಮನಗರ: ಮಾಸ್ಕ್ ಹಾಕಿ ಕರೊನಾದಿಂದ ರಕ್ಷಿಸಿಕೊಳ್ಳಿ ಮತ್ತು ಬೇರೆಯವರನ್ನೂ ರಕ್ಷಿಸಿ ಎನ್ನುವುದು ಕೇವಲ ಬಾಯಿ ಮಾತಿಗೆ ಎನ್ನುವಂತೆ ಆಗಿದ್ದು, ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ತಿನಿಸುಗಳನ್ನು ಮಾರಾಟ ಮಾಡುವ ಮಂದಿ ರೋಗ ಹರಡುವ ಮಧ್ಯವರ್ತಿಗಳಾಗಿದ್ದಾರೆ.
ಹೌದು, ರಾಮನಗರದ ಹೃದಯ ಭಾಗ ಐಜೂರು ವೃತ್ತದಲ್ಲಿ ಪ್ರತಿದಿನ ಹತ್ತಾರು ವ್ಯಾಪಾರಿಗಳು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಕತ್ತರಿಸಿದ ಹಣ್ಣುಗಳು, ತಿಂಡಿ ತಿನಿಸುಗಳು, ವಾಹನದ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಜೀವನದ ಬಂಡಿಯನ್ನು ಮುನ್ನಡೆಸುತ್ತಿದ್ದಾರೆ. ಕರೊನಾ ಬಂದ ನಂತರ ಇವರ ಬದುಕು ಸಹ ಅತಂತ್ರವಾಗಿ, ಬದುಕು ಸಹಜ ಸ್ಥಿತಿಗೆ ಮರಳಿದ ನಂತರ ಇವರ ವ್ಯಾಪಾರವೂ ಚುರುಕು ಪಡೆದುಕೊಂಡಿದೆ. ಆದರೆ, ಇದೀಗ ಇವರೇ ಕರೊನಾ ಹರಡುವ ಮಧ್ಯವರ್ತಿಗಳಂತಾಗಿದ್ದು, ಯಾರೊಬ್ಬರೂ ಮಾಸ್ಕ್ ಧರಿಸದೆ ಮಾರಾಟಕ್ಕೆ ಇಳಿಯುತ್ತಿರುವುದು ಆತಂಕಕ್ಕೆ ಸೃಷ್ಟಿಸಿದೆ.
ಸಾವಿರಾರು ವಾಹನಗಳು: ಬೆಂಗಳೂರು - ಮೈಸೂರು ಮಾರ್ಗವಾಗಿ ಸಂಚರಿಸುವ ಸಾವಿರಾರು ವಾಹನಗಳು ರಾಮನಗರದ ಐಜೂರು ವೃತ್ತದ ಸಿಗ್ನಲ್ನಲ್ಲಿ ಕೆಲಕಾಲ ನಿಂತು ಸಾಗುತ್ತವೆ. ಬಹುತೇಕ ಸವಾರರು ವಾಹನಗಳ ಬಳಿಗೆ ಬಂದು ಕತ್ತರಿಸಿದ ಹಣ್ಣು ಇತರ ತಿನಿಸುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಮಾರಾಟ ಮಾಡುವವರ ಬಳಿಯೇ ಖರೀದಿ ಮಾಡುತ್ತಾರೆ. ಆದರೆ ಈ ವ್ಯಾಪಾರಿಗಳು ಮಾಸ್ಕ್ ಹಾಕದಿರುವುದರಿಂದ ಕರೊನಾಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಜತೆಗೆ, ಕರೊನಾ ಹರಡುವ ಸಾಧ್ಯತೆಯೂ ಹೆಚ್ಚಿದೆ.
ಪೊಲೀಸರೆದುರೇ ಮಾರಾಟ: ರಸ್ತೆಯಲ್ಲಿ ಮಾಸ್ಕ್ ಧರಿಸದೆ ಹಣ್ಣು ಮತ್ತು ಇತರ ತಿನಿಸುಗಳನ್ನು ಪೊಲೀಸರ ಎದುರು ಮಾರಾಟ ಮಾಡುತ್ತಾರೆ. ಆದರೆ, ಇವರನ್ನು ಎಚ್ಚರಿಸಲು ಪೊಲೀಸರು ಮುಂದಾದಂತೆ ಕಾಣುತ್ತಿಲ್ಲ. ಇದೇ ವೃತ್ತದಲ್ಲಿ ನಿಲ್ಲುವ ಸಂಚಾರ ಪೊಲೀಸರು ಮಾಸ್ಕ್ ಧರಿಸದ ಹಲವರಿಗೆ ದಂಡ ವಿಧಿಸಿದ್ದಾರೆ. ಆದರೆ, ಬೀದಿಬದಿ ವ್ಯಾಪಾರಿಗಳ ಕಡೆಗೆ ಗಮನ ಕೊಡುತ್ತಿಲ್ಲವೇಕೆ ಎನ್ನುವುದು ಪ್ರಶ್ನೆಯಾಗಿದೆ.
ಎಚ್ಚರಿಕೆ ನೀಡಬೇಕಿದೆ
ಬೀದಿಬದಿಯಲ್ಲಿ ಪ್ರತಿ ವಾಹನದ ಹಿಂದೆ ಓಡಿ, ಅವರ ಮನವೊಲಿಸಿ ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಬೇಕಾದ ಅಗತ್ಯವಿದೆ. ಮಾಸ್ಕ್ ಇಲ್ಲದೆ ಮಾರಾಟ ಮಾಡುವುದರಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವ ಜತೆಗೆ ಮಾಸ್ಕ್ ಹಾಕದಿದ್ದರೆ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಬೇಕಿದೆ.