

ಚಿಕ್ಕಬಳ್ಳಾಪುರ: ಜನಪರ ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಗಳು ಒಣ ಪ್ರತಿಷ್ಠೆ ಮತ್ತು ರಾಜಕಾರಣ ಬಿಡಬೇಕು ಎಂದು ಶಾಸಕ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ತಾಲೂಕಿನ ದಿಬ್ಬೂರಿನಲ್ಲಿ ಶನಿವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ದಿಬ್ಬೂರಿನಲ್ಲಿ ಸಾಮೂಹಿಕ ಶೌಚಗೃಹ ನಿರ್ಮಿಸುವ ವಿಚಾರದಲ್ಲಿ ಅನವಶ್ಯಕವಾಗಿ ವಿವಾದ ಉಂಟಾಗಿದೆ. ಇಲ್ಲಿನ ದೇವಸ್ಥಾನ ಎದುರು ಶೌಚಗೃಹ ಇರುವುದು ಸರಿಯಲ್ಲ. ಆದ್ದರಿಂದ ಗ್ರಾಮದಲ್ಲಿ ಸೂಕ್ತ ಜಾಗ ಗುರುತಿಸಲಾಗುವುದು, ಜತೆಗೆ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 10 ಲಕ್ಷ ರೂ. ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಚುನಾವಣೆ ಮುಗಿಯುತ್ತಿದ್ದಂತೆ ಜನಪ್ರತಿನಿಧಿಗಳು ರಾಜಕಾರಣ ಬಿಡಬೇಕು. ಪರಸ್ಪರ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಎಚ್.ಎನ್.ವ್ಯಾಲಿ ಯೋಜನೆಯಿಂದ ಕಂದವಾರ ಕೆರೆಗೆ ತ್ಯಾಜ್ಯ ಸಂಸ್ಕರಿಸಿದ ನೀರು ಹರಿಯಲಿದ್ದು, ೆಬ್ರವರಿ ಮೂರನೇ ಇಲ್ಲವೇ ನಾಲ್ಕನೇ ಶನಿವಾರ ಅದ್ಧೂರಿ ಜಲಜಾತ್ರೆ ಕೈಗೊಳ್ಳಲಾಗುವುದು. ಶ್ರೀನಿವಾಸ ಕಲ್ಯಾಣೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನೀರಾವರಿ ಸಮಸ್ಯೆ ಪರಿಹಾರಕ್ಕೆ ಆದಷ್ಟು ಬೇಗ ವಿವಿಧ ಯೋಜನೆಗಳಿಂದ ಕೆರೆಗಳಿಗೆ ನೀರನ್ನು ತುಂಬಿಸುವುದು, ಜನರ ವಲಸೆ ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗಾವಕಾಶ ಒದಗಿಸಬೇಕು ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮನವಿ ಮಾಡಿದರು.
ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಮೋಹನ್, ಪ್ರಸಾದ್, ಸಿ.ಎಸ್.ಎನ್.ರಮೇಶ್, ಕೇಶವಕುಮಾರ್ ಇತರರಿದ್ದರು.
ರಸ್ತೆ ಅಭಿವದ್ಧಿ ಕಾಮಗಾರಿ: ಲೋಕೋಪಯೋಗಿ ಇಲಾಖೆ ಸಿಎಂಜಿಆರ್‌ವೈ ಯೋಜನೆಯಲ್ಲಿ 1.40 ಕೋಟಿ ರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 7ರಿಂದ ಅಬ್ಲೂಡು ರಸ್ತೆ, 90 ಲಕ್ಷ ರೂ. ವೆಚ್ಚದಲ್ಲಿ ದಿಬ್ಬೂರು ಅಜ್ಜಕದಿರೇನಹಳ್ಳಿ ರಸ್ತೆ ಸೇರಿ 2.30 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸಮುದಾಯ ಭವನಕ್ಕೆ ಚಾಲನೆ : ತಾಲೂಕು ಪಂಚಾಯಿತಿಯಿಂದ ಚಿತ್ರಾವತಿ ಶ್ರೀ ಸುಬ್ರಮಣ್ಯೇಶ್ವರ ದೇವಾಲಯದ ಮುಂಭಾಗ 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.