ರಸ್ತೆ ಅಗಲವಾಗದೆ ಅಪಾಯ ROAD

ಸಾರಡ್ಕ ಸಮೀಪ ತೋಟದ ನಡುವಿನಲ್ಲಿ ಸಾಗುವ ರಸ್ತೆ ಕಿರಿದಾಗಿದೆ ಮತ್ತು ಹಳೇ ಡಾಂಬರು ಎದ್ದು ಹೋಗುತ್ತಿದೆ.
ಸಾರಡ್ಕ ಸಮೀಪ ತೋಟದ ನಡುವಿನಲ್ಲಿ ಸಾಗುವ ರಸ್ತೆ ಕಿರಿದಾಗಿದೆ ಮತ್ತು ಹಳೇ ಡಾಂಬರು ಎದ್ದು ಹೋಗುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಲಡ್ಕ-ಪಡಿಬಾಗಿಲು-ಸಾರಡ್ಕ ಮಧ್ಯೆ ಸಮಸ್ಯೆ
  • ಸಂಚಾರ ನಿತ್ಯ ಸಂಕಟ
ವಿಟ್ಲ: ಹಳೆಯ ರಸ್ತೆಗೆ ತೇಪೆ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಸಮರ್ಪಕ ಅಗಲೀಕರಣವಾಗದೆ ಸಮಸ್ಯೆಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಯ ಮಾನದಂಡಕ್ಕೆ ರಸ್ತೆ 7ಮೀಟರ್‌ ಅಗಲ ಇರಬೇಕಾಗಿದ್ದು, ಪಡಿಬಾಗಿಲುವಿನಿಂದ ಸಾರಡ್ಕವರೆಗೆ ಅಭಿವೃದ್ಧಿಯಾಗುವ ಅಗತ್ಯವಿದೆ. ಸದ್ಯ 2 ಕಿ.ಮೀ. ರಸ್ತೆ ನವೀಕರಣಕ್ಕೆ 5 ಕೋಟಿ ರೂ.ಪ್ರಸ್ತಾವನೆ ಕಳುಹಿಸಿದ್ದು, ಇನ್ನಷ್ಟು ಅನುದಾನದ ಅವಶ್ಯಕತೆಯಿದೆ.
ಕಡೂರು-ಕಾಞಂಗಾಡು ಅಂತಾರಾಜ್ಯ ಹೆದ್ದಾರಿಯ ಬಹುತೇಕ ಕಡೆಯಲ್ಲಿ ಈಗಾಗಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಕಡೂರು-ಬಿ.ಸಿ.ರೋಡು ಹಾಗೂ ಕೇರಳದ ಕಾಞಂಗಾಡು-ಚೆರ್ಕಳ ಮಧ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಕಲ್ಲಡ್ಕದಿಂದ ಸಾರಡ್ಕವರೆಗೆ ಅಗಲೀಕರಣ ಪ್ರಕ್ರಿಯೆಗೆ ತೊಡಗಬೇಕೆಂಬ ಕೂಗು ಕೇಳುತ್ತಿದೆ.
ಕೇರಳ ಭಾಗದಲ್ಲಿ ಹಂತ ಹಂತದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಪಡಿಬಾಗಿಲು-ಸಾರಡ್ಕ ಮಧ್ಯೆ ಇನ್ನೂ 5.5 ಮೀಟರ್‌ ರಸ್ತೆ ಅಗಲೀಕರಣವಿದ್ದು, ಇದಕ್ಕೇ ತೇಪೆ ಹಾಕಲಾಗುತ್ತಿದೆ. ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಯಾದರೂ, ಇನ್ನೂ 7 ಮೀಟರ್‌ ಆಗಿ ಪರಿವರ್ತನೆಯಾಗಿಲ್ಲ. ಇದಕ್ಕೆ ಅಗತ್ಯ ಅನುದಾನ ನೀಡುವ ಕಾರ್ಯ ಸರ್ಕಾರದಿಂದ ನಡೆಯಬೇಕೆಂಬ ಕೂಗು ಕೇಳುತ್ತಿದೆ.

ಸದ್ಯ ತೇಪೆಯೇ ಗತಿ

ಪಡಿಬಾಗಿಲು-ಸಾರಡ್ಕ ಮಧ್ಯದಲ್ಲಿ ಕೆಲವು ವರ್ಷಗಳಿಂದ ಹೊಸ ಡಾಂಬರೀಕರಣ ಕಾರ್ಯವಾಗದೆ ಇರುವ ಗುಂಡಿಗಳಿಗೆ ತೇಪೆ ಹಾಕಲಾಗುತ್ತದೆ. ಇದು ವಾಹನದ ಓಡಾಟದಿಂದ ಎದ್ದು ಹೋಗುತ್ತಿದೆ. ಸಂಪೂರ್ಣ ರಸ್ತೆ ಅಭಿವೃದ್ಧಿಯಾಗದೆ ತೇಪೆಯನ್ನೇ ಹಾಕುತ್ತಿದ್ದರೆ ಮುಂದಿನ ವರ್ಷದಿಂದ ಅದಕ್ಕೂ ಅವಕಾಶವಿಲ್ಲದಂತೆ ಹಾನಿಯಾಗುವ ಸಾಧ್ಯತೆಾುದೆ.

ಸೈಡ್‌ ಕೊಡಲು ಸ್ಥಳಿವಿಲ್ಲ

ರಸ್ತೆ 5.5 ಮೀ ಇರುವಲ್ಲಿ ರಸ್ತೆಗಳ ಬದಿ ಕಿತ್ತು ಹೋಗುತ್ತಿದೆ. ಇದಕ್ಕೆ ತೇಪೆ ಹಾಕಿದರೂ, ಚರಂಡಿ ಅಡಿಯಲ್ಲಿ ಸಮರ್ಪಕ ಜಲ್ಲಿ ಇಲ್ಲದ ಕಾರಣ ಎದ್ದು ಹೋಗುತ್ತದೆ. ಇದರ ಜತೆಗೆ 14ರಿಂದ 20 ಚಕ್ರದ ಲಾರಿಗಳ ಓಡಾಟಕ್ಕೆ ರಸ್ತೆಯ ಅಂಚು ಕಿತ್ತು ಹೋಗುತ್ತಿದೆ. ಅದಕ್ಕೆ ತೇಪೆ ಹಾಕಿದರೂ ಅದು ಭಾರಕ್ಕೆ ಎದ್ದು ಹೋಗುತ್ತಿದೆ. ಈ ನಿಟ್ಟಿನಲ್ಲಿ ಅಗಲೀಕರಣ ಕಾರ್ಯ ನಡೆಯಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಯಾಗುತ್ತಿತ್ತು

ಕಲ್ಲಡ್ಕದಿಂದ ಸಾರಡ್ಕ ನಡುವೆ 7ಮೀ ಅಗಲವಿದ್ದಿದ್ದರೆ, ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿ ರಸ್ತೆ ಮೇಲ್ದರ್ಜೆಗೆ ಏರಿಯಾಗುತ್ತಿತ್ತು. ಸರ್ಕಾರ ಹಂತ ಹಂತವಾಗಿ ರಸ್ತೆಯಲ್ಲಿ 7ಮೀಟರ್‌ ಆಗಿ ಪರಿವರ್ತಿಸಿಕೊಂಡು ಬಂದು ಕಲ್ಲಡ್ಕ-ಪಡಿಬಾಗಿಲು ನಡುವೆ ಅಗಲೀಕರಣವಾಗಿದೆ. ಇದು ಸಂಪೂರ್ಣವಾಗಿ ಸಾರಡ್ಕ ತಲುಪಿದರೆ ಬಳಿಕ ಎನ್‌. ಎಚ್‌. ಆಗಿ ಮೇಲ್ದರ್ಜೆಗೇರುವ ಎಲ್ಲಾ ಸಾಧ್ಯತೆಗಳಿವೆ.
"

ಹಳೆಯ ಡಾಂಬರು ಮೇಲೆ ತೇಪೆ ಹಾಕುವುದರಿಂದ ಬಿಸಿಲಿನ ತಾಪಕ್ಕೆ ಪದರ ಪದರವಾಗಿ ಎದ್ದು ಹೋಗುತ್ತಿದೆ. ಇದರಿಂದ ಏಕಾಏಕಿ ರಸ್ತೆಗಳಲ್ಲಿ ಗುಂಡಿಗಳು ಪ್ರತ್ಯಕ್ಷವಾಗಿ ವಾಹನಗಳಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮುಂದಿನ ಬೇಸಿಗೆ ಸಮಯದಲ್ಲಾದರೂ, ಪಡಿಬಾಗಿಲು-ಸಾರಡ್ಕ ಮದ್ಯ ರಸ್ತೆಗೆ ಹೆಚ್ಚಿನ ಅನುದಾನ ನೀಡುವ ಕಾರ್ಯವಾಗಬೇಕಾಗಿದೆ.

— ರಮೇಶ್‌, ಸ್ಥಳೀಯ ನಿವಾಸಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net