

ಶಿರಹಟ್ಟಿ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಂಡು ಗುತ್ತಿಗೆದಾರರು ನಿಗದಿತ ಅವಧಿಯಲ್ಲೇ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಹೊಳಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 5.5 ಲಕ್ಷ ರೂ. ವೆಚ್ಚದಲ್ಲಿ ಪೇವರ್ಸ್ ಅಳವಡಿಕೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ದೇವಸ್ಥಾನದ ಆವರಣದಲ್ಲಿ ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ. ಈ ಹಿಂದೆ ಒಂದೇ ಕಾಮಗಾರಿಗೆ ಎರಡು ಯೋಜನೆಗಳಲ್ಲಿ ಅನುದಾನ ನೀಡಿದ್ದರೂ ಕೆಲವೇ ತಿಂಗಳಲ್ಲಿ ಕಾಮಗಾರಿ ಗುಣಮಟ್ಟ ಕಳೆದುಕೊಂಡು ಹಾಳಾದ ಉದಾಹರಣೆಗಳಿವೆ. ಇಂತಹ ಪದ್ಧತಿಯನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೈಬಿಡಬೇಕು ಎಂದು ಎಚ್ಚರಿಸಿದರು.
ರಾಜ್ಯದಲ್ಲಿಯೇ ಶಿರಹಟ್ಟಿ ಕ್ಷೇತ್ರವು ಅತ್ಯಂತ ಹಿಂದುಳಿದಿದ್ದು, ಅಭಿವೃದ್ಧಿಗೆ ಸರ್ಕಾರ ತಾರತಮ್ಯ ಮಾಡದೆ ಅನುದಾನ ನೀಡಬೇಕು. ತಾಲೂಕಿನಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿವೆ. ಲಭ್ಯವಿರುವ ಅನುದಾನ ಬಳಸಿಕೊಂಡು ಅಲ್ಲಲ್ಲಿ ರಸ್ತೆ ಸುಧಾರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಬಿ.ಡಿ. ಪಲ್ಲೇದ, ಬಸವರಾಜ ನಾಯ್ಕರ, ಗುರು ನಾಯ್ಕರ, ಆರ್.ಡಿ. ಕೆಂಚಕ್ಕನವರ, ರಮೇಶ ಡೊಂಕಬಳ್ಳಿ, ಬಸವರಾಜ ಹಾದಿಮನಿ, ನಿಂಗಪ್ಪ ಬೂದಿಹಾಳ, ಈಶ್ವರ ಗುಂಜಳ, ನೀಲಪ್ಪ ಕರೆಯಣ್ಣವರ, ನೀಲನಗೌಡ ಪಾಟೀಲ, ವಿನಾಯಕ ತೋಟರ, ರಮೇಶ ಮಲ್ಲಿಕಾರ್ಜುನ ಕೋಡಿ ಉಪಸ್ಥಿತರಿದ್ದರು.