ಮೈಗಟ್ಟಿಯಿದ್ದರೆ ಮಾತ್ರ ಮೈಂಗಿಣಿ ರಸ್ತೆ ಸಂಚಾರ!

4KWR1
Published on

ಕಾರವಾರ: ತಾಲೂಕಿನ ಗೋಪಶಿಟ್ಟಾ ನಾಕಾದಿಂದ ಗೋವಾ ಗಡಿಯವರೆಗೆ ಮೈಂಗಿಣಿ ಗ್ರಾಮದ ಮೂಲಕ ತೆರಳುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದೆ. ಲೋಕೋಪಯೋಗಿ ಇಲಾಖೆಗೆ ಅಲ್ಲಲ್ಲಿ ರಸ್ತೆಗೆ ಪ್ಯಾಚ್ ವರ್ಕ್ ಮಾಡಿ, ಬಿಲ್ ಮಾಡುವ ಪ್ರಯತ್ನ ನಡೆಸಿರುವ ಆರೋಪ ಕೇಳಿ ಬಂದಿದೆ.

ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಗೋಪಶಿಟ್ಟಾ ನಾಕಾದಿಂದ ಮೈಂಗಿಣಿ ಗ್ರಾಮದ ಮೂಲಕ ತೆರಳಿದರೆ ಗೋವಾದ ಮಾರ್ಲಿ ಗ್ರಾಮಕ್ಕೆ ತಲುಪಬಹುದು. ಸುಮಾರು 10 ಕಿಮೀಯಲ್ಲಿ ಗೋವಾದ ಪರ್ತಗಾಳಿ ಸಮೀಪ ಸೇರಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಅನ್ನು ಬಿಟ್ಟರೆ ಗೋವಾಕ್ಕೆ ತೆರಳುವ ಪೋರ್ಚುಗೀಸರ ಕಾಲದ ಅಧಿಕೃತ ರಸ್ತೆ ಇದಾಗಿದೆ. ಸದಾಶಿವಗಡ, ಹಣಕೋಣ, ಕದ್ರಾ ಭಾಗದಿಂದ ಗೋವಾಕ್ಕೆ ಸ್ವಂತ ವಾಹನದಲ್ಲಿ ಉದ್ಯೋಗಕ್ಕೆ ತೆರಳುವ ಹಲವರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಇದರಿಂದ ಪ್ರತಿ ನಿತ್ಯ ಕನಿಷ್ಠ 100 ವಾಹನಗಳು ಈ ಮಾರ್ಗವಾಗಿ ಓಡಾಡುತ್ತವೆ. ನಡುವೆ ಮೈಂಗಿಣಿ ಗ್ರಾಮವಿದ್ದು, ಸುಮಾರು 25 ಮನೆಗಳಿವೆ. 70 ಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮದವರು ಗೋವಾಕ್ಕೆ ಉದ್ಯೋಗಕ್ಕೆ ತೆರಳಲು, ಕಾರವಾರಕ್ಕೆ ತಮ್ಮ ಕೋರ್ಟ್, ಕಚೇರಿ ವ್ಯವಹಾರಗಳಿಗೆ ಆಗಮಿಸಲು ಇದೇ ಮಾರ್ಗ ಅವಲಂಬಿಸಿದ್ದಾರೆ.

ಕರ್ನಾಟಕಕ್ಕೆ ಸೇರಿದ 7.5 ಕಿಮೀ ರಸ್ತೆಯನ್ನು 2011ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅದು ಸಂಪೂರ್ಣ ಹಾಳಾಗಿ ಹೋಗಿದೆ. 2022-23 ರಲ್ಲಿ ಸುಮಾರು 2 ಕಿಮೀ ರಸ್ತೆಯನ್ನು ದುರಸ್ತಿ ಮಾಡಲಾಯಿತು. ಆ ಭಾಗವನ್ನು ಬಿಟ್ಟರೆ ಉಳಿದ ಸಂಪೂರ್ಣ ಡಾಂಬರ್ ರಸ್ತೆ ಕಿತ್ತು ಹೋಗಿದ್ದು, ಕಡಿ ರಸ್ತೆಯಂತಾಗಿದೆ. ಸ್ಕಿಡ್ ಆಗಿ ಬಿದ್ದು, ಹಲವು ಬೈಕ್ ಸವಾರರು ಗಾಯಗೊಂಡಿದ್ದಾರೆ. ಇದರಿಂದ ಸಂಪೂರ್ಣ ರಸ್ತೆಯನ್ನು ಮರು ಡಾಂಬರೀಕರಣ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

25 ಕಡೆ ಪ್ಯಾಚ್ ವರ್ಕ್: ಸುಮಾರು 5 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಆದರೆ, ಈ ನಡುವೆ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರು ಕಳೆದ ವಾರ ಆಗಮಿಸಿ ಸುಮಾರು 25 ಕಡೆ ಡಾಂಬರಿನ ಪ್ಯಾಚ್ ವರ್ಕ್ ಮಾಡಿ ತೆರಳಿದ್ದಾರೆ. ಸಂಪೂರ್ಣ ರಸ್ತೆ ಕಿತ್ತೆದ್ದು, ಹೋಗಿರುವಾರ ಬಿಲ್ ಮಾಡುವ ನೆಪಕ್ಕೆ ಮಾತ್ರ ಪ್ಯಾಚ್‌ವರ್ಕ್ ಮಾಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಈಗ ಮಾಡಿರುವ ಪ್ಯಾಚ್‌ವರ್ಕ್ ಕೂಡ ಸರಿಯಾಗಿ ಮಾಡಿಲ್ಲ. ಅದು ಒಂದೆರಡು ದಿನದಲ್ಲಿ ಕಿತ್ತು ಹೋಗುವಂತಿದೆ.

ಈ ಪ್ಯಾಚ್‌ವರ್ಕ್ ಮಾಡಿದ ಕಾಮಗಾರಿಯನ್ನು ಪರಿಗಣಿಸಬಾರದು. ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಕೋಯರ್ ಬಾಬು ಗಾಂವಕರ್, ಪ್ರಭಾಕರ ಗಾಂವಕರ್, ಶಶಿಕಾಂತ ಗಾಂವಕರ್, ನಿತೇಶ ಗಾಂವಕರ್, ರಾಮಕೃಷ್ಣ ಗಾಂವಕರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net