

ಕವಿತಾಳ: ಸಮೀಪದ ಬಾಗಲವಾಡದಲ್ಲಿ ಮುಖ್ಯರಸ್ತೆ ವಿಸ್ತರಣೆ ಹಾಗೂ ಚರಂಡಿ ವ್ಯವಸ್ಥೆ ಕೈಗೊಳ್ಳುವಂತೆ ದಲಿತ ಸಂಘಟನೆ ಮತ್ತು ಗ್ರಾಮಸ್ಥರು ನಡೆಸಿದ ಅನಿರ್ದಿಷ್ಟಾವಧಿ ಧರಣಿಗೆ ಸ್ಪಂದಿಸಿದ ಗ್ರಾಪಂ ಆಡಳಿತ ಶನಿವಾರ ಕಾಮಗಾರಿಗೆ ಚಾಲನೆ ನೀಡಿತು.
ರಸ್ತೆ ವಿಸ್ತರಣೆ ಮಾಡಲು ಸರ್ವೇ ಕೂಡಾ ನಡೆಸಲಾಗಿತ್ತು. ಎರಡು ವರ್ಷ ಕಳೆದರೂ ಗ್ರಾಪಂ ಕಾಮಗಾರಿ ಆರಂಭಿಸಿರಲಿಲ್ಲ. ಕಾಮಗಾರಿಗೆ 2ಕೋಟಿ ರೂ. ಬಿಡುಗಡೆಯಾದರೂ ಕಾಮಗಾರಿ ಆರಂಭಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು.
ಮಾಜಿ ಶಾಸಕ ವೆಂಕಟಪ್ಪನಾಯಕ, ಗಂಗಾಧರ ನಾಯಕ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿ ಅಧಿಕಾರಿಗಳಿಗೆ ಕಾಮಗಾರಿ ಆರಂಭ ಮಾಡುವಂತೆ ಸೂಚನೆ ನೀಡಿದ್ದರು. ಲೋಕೋಪಯೋಗಿ ಕಾರ್ಯ ನಿರ್ವಾಹಕ ಅಧಿಕಾರಿ ಶ್ಯಾಮಲಪ್ಪ ಭೇಟಿ ನೀಡಿ ಮೇಲಧಿಕಾರಿಗಳ ಆದೇಶದಂತೆ ಕಾಮಗಾರಿ ಆರಂಭಿಸುವುದಾಗಿ ತಿಳಿಸಿ ರಸ್ತೆ ಪಕ್ಕದಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಆರಂಭಿಸಿದರು.
ನಾಡ ತಹಸೀಲ್ದಾರ್ ರಾಜಕುಮಾರ, ಗುರಪ್ಪ ಸಹುಕಾರ, ಅಮರೇಶ ಸಿಡಿ, ಅಮರೇಶ ನಾಯಕ, ಬಸವರಾಜ ಮೇಟಿ, ಯಮನಪ್ಪ ಯಾದವ, ಅಮರೇಶ ದೇಸಾಯಿ, ಬೀರಪ್ಪ ಸಾಹುಕಾರ, ಗಂಗಾಧರ, ಬಸವರಾಜ ದೇಸಾಯಿ, ಬಸವರಾಜ ದ್ಯಾವಣ್ಣವರ, ಮೌನೇಶ ಕೋರಿ, ನಾಗರಾಜ ಹಿಂದಿಮನೆ, ಜಗದೀಶ ಸಾಸಲಮರಿ, ಮಹಾದೇವಪ್ಪ ಕೋರಿ, ಅಮರೇಶ ಬಾದರದಿನ್ನಿ, ನಾಗರಾಜ ಭೋವಿ, ಮೌಲಸಾಬ್, ವಿಶ್ವನಾಥ ಸಾಲಮನಿ ಇತರರಿದ್ದರು.