

ಆನೇಕಲ್: ಚಂದಾಪುರ ಸಮೀಪದ ಬನಹಳ್ಳಿಯಲ್ಲಿ ರಸ್ತೆ ಸ್ಫೋಟಗೊಂಡು ಆತಂಕ ಸೃಷ್ಟಿಸಿದೆ. ಸೋಮವಾರ ಮಧ್ಯಾಹ್ನದ ಸುಮಾರಿಗೆ ಕಾಂಕ್ರೀಟ್ ರಸ್ತೆ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ರಸ್ತೆಯ ಸಿಮೆಂಟ್ ಹಾಗೂ ಜಲ್ಲಿ ಕಲ್ಲುಗಳು ಕಿತ್ತು ಬಂದಿದ್ದು, ಸುಮಾರು ನೂರು ಮೀಟರ್ ದೂರಕ್ಕೆ ಅವಶೇಷ ಹಾರಿದೆ. ಸ್ಫೋಟದ ಜತೆ ಬೆಂಕಿ ಕಿಡಿ ಕೂಡ ಕಾಣಿಸಿಕೊಂಡಿದೆ. ಸ್ಫೋಟಕ್ಕೆ ಕೆಲವೇ ಕ್ಷಣದ ಮೊದಲು ವಾಟರ್ ಟ್ಯಾಂಕರ್ ವಾಹನ ಹಾದು ಹೋಗಿತ್ತು, ಮುಂದಕ್ಕೆ ಟ್ಯಾಂಕರ್ ಸಾಗುತ್ತಿದ್ದಂತೆ ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಿದ್ಯುತ್ ತಂತಿ ಕಾರಣ: ರಸ್ತೆ ಮೇಲೆ ಹಾದು ಹೋಗಿರುವ 220 ಕೆವಿ ಹೈವೋಲ್ಟೆಜ್ ವಿದ್ಯುತ್ ತಂತಿಯಿಂದಾಗಿ ಈ ಅವಡ ಸಂಭವಿಸಿದೆ ಎಂದು ಚಂದಾಪುರ ಕೆಪಿಟಿಸಿಎಲ್ ಜೆಇ ಮಹೇಶ್ ತಿಳಿಸಿದ್ದಾರೆ.
220 ಕೆವಿ ವಿದ್ಯುತ್ ತಂತಿ ಕೆಳಗೆ ಜೋತು ಬಿದ್ದಿದ್ದು, ಅದರ ಕೆಳಗೆ ಎತ್ತರದ ವಾಹನ ಹಾದು ಹೋದರೆ ಅರ್ಥಿಂಗ್ ಜೋನ್ಗೆ ಾಲ್ಟ್ ಕರೆಂಟ್ ನುಗ್ಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಫೋಟ ಆಗುತ್ತಿದ್ದಂತೆ ಲೈನ್ ಟ್ರಿಪ್ ಆಗಿದೆ. ಹಾಗಾಗಿ ಸ್ಫೋಟದಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾರಂಡಹಳ್ಳಿಯಿಂದ ತಮಿಳುನಾಡಿಗೆ ವಿದ್ಯುತ್ ಪೂರೈಸುವ ಮಾರ್ಗ ಇದಾಗಿದ್ದು, ತುಂಬಾ ಹಳೆಯ ಲೈನ್ ಆಗಿದ್ದರಿಂದ ಬಿಸಿಲಿಗೆ ಜೋತು ಬೀಳುತ್ತವೆ. ಲೈನ್ ದುರಸ್ತಿಗೆ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾತ್ಕಾಲಿಕವಾಗಿ ಜೋತು ಬಿದ್ದಿರುವ ಲೈನ್ ಸರಿಪಡಿಸಲಾಗುವುದು ಎಂದು ಕೆಪಿಟಿಸಿಎಲ್ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.