ರಸ್ತೆಗಳ ವಿಸ್ತರಣೆಗೆ ಆಗ್ರಹಿಸಿ ಜಗಳೂರಿನಲ್ಲಿ ಪ್ರತಿಭಟನೆ

181
Published on

ಜಗಳೂರು : ಪಟ್ಟಣದ ಪ್ರಮುಖ ರಸ್ತೆಗಳನ್ನು ವಿಸ್ತರಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣ, ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ, ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಲಕ್ಷ್ಮಣ್ ನಾಯಕ ಮಾತನಾಡಿ, ಜಗಳೂರು ತಾಲೂಕು ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪಟ್ಟಣದ ಮುಖ್ಯರಸ್ತೆಗಳು ಇಕ್ಕಟ್ಟಾಗಿವೆ. ಇದರಿಂದ ನಿತ್ಯ ವಾಹನ ಸವಾರರು, ಪಾದಚಾರಿಗಳು, ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ವಿಸ್ತರಣೆ ಮಾಡಲು ಅನೇಕ ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು.

ದಾವಣಗೆರೆ ರಸ್ತೆಯ ನ್ಯಾಯಾಲಯದಿಂದ ಚಳ್ಳಕೆರೆ ರಸ್ತೆವರೆಗೂ ಹಾಗೂ ಕೊಟ್ಟೂರು ರಸ್ತೆ, ಬಿದರಕೆರೆ ರಸ್ತೆ, ಮರೇನಹಳ್ಳಿ ರಸ್ತೆಗಳನ್ನು ವಿಸ್ತರಣೆ ಮಾಡಬೇಕಾಗಿದೆ ಎಂದರು.

ಪಟ್ಟಣದ ಹೊರವಲಯದ ರಿಂಗ್ ರಸ್ತೆ ಮಾಡುವ ಪ್ರಯತ್ನ ನಡೆದು ಸರ್ವೇ ಕೂಡ ಮುಗಿದಿದೆ. ಈ ಬಗ್ಗೆ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಗಮನಹರಿಸಿಲ್ಲ ಎಂದು ದೂರಿದರು.

ಶಾಸಕ ಬಿ. ದೇವೇಂದ್ರಪ್ಪ ಅವರು ಈಗಾಗಲೇ ರಸ್ತೆ ವಿಸ್ತರಣೆಗೆ ಸುಮಾರು 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಇದಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಯಾವ ರಾಜಕೀಯ ಒತ್ತಡಕ್ಕೂ ಮಣಿಯಬಾರದು ಎಂದರು.

ರೈತ ಸಂಘದ ತಾಲೂಕ ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ, ಹಸಿರು ಸೇನೆ ತಾಲೂಕು ಗೌರವಾಧ್ಯಕ್ಷ ಗುರುಸಿದ್ದಪ್ಪ, ಜಂಟಿ ಕಾರ್ಯದರ್ಶಿ ಬಿ. ಕುಮಾರ್, ಲೋಕಣ್ಣ, ಸಕ್ರೇಶ, ಓಬಯ್ಯ, ಮಾರಪ್ಪ, ಜಯಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net