ಬನಘಟ್ಟದಿಂದ ಕಿರಂಗೂರುವರೆಗೆ ರಸ್ತೆ ವಿಸ್ತರಣೆ

7-pnp 1a
ಪಾಂಡವಪುರ ತಾಲೂಕಿನ ಬನಘಟ್ಟದಿಂದ ಶ್ರೀರಂಗಪಟ್ಟಣದ ಕಿರಂಗೂರಿನವರೆಗೂ ರಾಷ್ಟ್ರೀಯ ಹೆದ್ದಾರಿ ಅಭೀವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಚ್.ತ್ಯಾಗರಾಜು, ಕಾಡೇನಹಳ್ಳಿ ರಾಮಚಂದ್ರು ಇತರರು ಇದ್ದರು.
Published on

 ಪಾಂಡವಪುರ: ತಾಲೂಕಿನ ಬನಘಟ್ಟದಿಂದ ಶ್ರೀರಂಗಪಟ್ಟಣದ ಕಿರಂಗೂರಿನವರೆಗೂ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ರೈಲ್ವೆ ನಿಲ್ದಾಣದ ಪಿಎಸ್‌ಎಸ್‌ಕೆ ಕಾರ್ಖಾನೆ ಮುಂಭಾಗ ತಾಲೂಕಿನ ಬನಘಟ್ಟದಿಂದ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರಿನವರೆಗೂ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 1999 ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಹೆದ್ದಾರಿ ಕೆಲಸ ಪ್ರಾರಂಭಿಸಿದರು. ಆನಂತರದಲ್ಲಿ 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹದೇವಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದ ವೇಳೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ 10 ಮೀಟರ್ ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಒಪ್ಪಿಗೆ ಸಿಕ್ಕಿದ್ದು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ: ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ವಾಹನಗಳ ಸಂಚಾರ ದಟ್ಟವಾಗಿದೆ. ಈ ರಸ್ತೆಯ ಮಾರ್ಗವಾಗಿ ತುಮಕೂರು, ಬೀದರ್, ಹಾಸನ, ಚನ್ನರಾಯಪಟ್ಟಣ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಇದೇ ಮಾರ್ಗವಾಗಿ ಸಂಚರಿಸಬೇಕಿದೆ. ಹೀಗಾಗಿ ರಸ್ತೆ ಗುಣಮಟ್ಟ ಕಾಯ್ದುಕೊಳ್ಳುವುದು ತುಂಬ ಮುಖ್ಯವಾಗಿದೆ. ಇದಕ್ಕಾಗಿ ರಸ್ತೆ ಗುಣಮಟ್ಟ ಕಾಯ್ದುಕೊಂಡು ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಅಂದಾಜು ವೆಚ್ಚ 42 ಕೋಟಿಗಳಿಗಿಂತ ಶೇ.33 ರಷ್ಟು ಕಡಿಮೆ ದರಕ್ಕೆ ಟೆಂಡರ್ ಪಡೆದಿದ್ದಾರೆ. ಇಷ್ಟು ಕೆಳಗಿನ ದರಕ್ಕೆ ಕಾಮಗಾರಿ ನಡೆಸುವುದು ಕಷ್ಟಕರ. ಯಾವ ಆಧಾರದ ಮೇಲೆ ಗುತ್ತಿಗೆ ಪಡೆದಿದ್ದಾರೆ ಗೊತ್ತಿಲ್ಲ. ಆದರೆ ರಸ್ತೆ ಕಾಮಗಾರಿ ಗುಣಮಟ್ಟವಾಗಿರಬೇಕು ಎಂಬುದು ಮುಖ್ಯ ಎಂದರು.

ಪಾಂಡವಪುರ ರೈಲ್ವೆ ನಿಲ್ದಾಣದಿಂದ ಚನ್ನರಾಯಪಟ್ಟಣದವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಮನವಿ ಮಾಡಲಾಗಿದೆ. ಇದಕ್ಕೆ ಅನುಮತಿ ದೊರೆತು ಕೇಂದ್ರ ಸರ್ಕಾರವೇ ರಸ್ತೆ ಅಭಿವೃದ್ಧಿ ಪಡಿಸಿದರೆ ಒಳಿತು. ಇಲ್ಲವಾದರೆ ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಇದಕ್ಕೂ ಮೊದಲು ತಾಲೂಕಿನ ಮೇಲುಕೋಟೆಯಲ್ಲಿ ನಾಡಕಚೇರಿ ಕಟ್ಟಡ ಮತ್ತು ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಅನ್ನ ಪ್ರಸಾದ ಭವನ ಉದ್ಘಾಟನೆ ಮತ್ತು ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಮನುಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತಸಂಘ ಮುಖಂಡರಾದ ಎಸ್.ದಯಾನಂದ್, ಚಿಕ್ಕಾಡೆ ವಿಜೇಂದ್ರ, ಬಾಬುರಾಯನಕೊಪ್ಪಲು ಸಂದೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net