

ಕೊಪ್ಪಳ: ಗಿಣಿಗೇರಾದಲ್ಲಿ ಹಾದು ಹೋಗಿರುವ ರಸ್ತೆಯ ದುರಸ್ತಿ ಕೈಗೊಳ್ಳುವಂತೆ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಗಂಗಾವತಿಯಿಂದ ಗ್ರಾಮ ಸಂಪರ್ಕಿಸುವ ರಸ್ತೆ ಊರ ಹೊರಗಿನವರೆಗೆ ಸುಸಜ್ಜಿತವಾಗಿದೆ. ಕೊಪ್ಪಳದಿಂದಲೂ ಗ್ರಾಮದವರೆಗೆ ರಸ್ತೆ ನಿರ್ಮಿಸಲಾಗಿದೆ. ಆದರೆ, ಗ್ರಾಮದ ಒಳಗೆ ರಸ್ತೆ ಕೆಟ್ಟಿದ್ದು, ಬಹಳ ವರ್ಷಗಳಾಗಿವೆ. ಧೂಳಿನಿಂದ ಆರೋಗ್ಯ ಸೇರಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ರಿಪೇರಿ ಮಾಡುವಂತೆ ಮನವಿ-ಹೋರಾಟ ಮಾಡಿದರೂ ಅಧಿಕಾರಿಗಳು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಹೊನ್ನಪ್ಪ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಮೂರು ದಿನದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದಿದ್ದರೆ, ಹೋರಾಟ ತೀವ್ರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಮುಖಂಡರಾದ ಶರಣು ಗಡ್ಡಿ, ರಮೇಶ ವಂಕಲಕುಂಟಿ, ಮಂಗಳೇಶ ರಾಥೋಡ್, ಆನಂದ, ಸುರೇಶ ಕಲಾಲ್, ಪ್ರಶಾಂತ ಹಿರೇಮಠ, ದವಲ್ ಮಲಿಕ್, ಅಂಬಣ್ಣ ಮೂರ್ಮನಿ, ಮೌನೇಶ್, ಮಾರುತಿ, ಗ್ರಾಪಂ ಸದಸ್ಯರಾದ ಮಂಜುನಾಥ ಪಾಟೀಲ್, ಬಾಬಣ್ಣ ಗೋಡೆ ಕಾರ್, ಗ್ರಾಮಸ್ಥರಾದ ಪ್ರಶಾಂತ್, ತಾಜುದ್ದೀನ್, ಪುಟ್ಟಪ್ಪ, ಲಾಲ್ ಸಾಬ್ ಇತರರಿದ್ದರು.