ರಸ್ತೆ ವಿಭಜಕದ ಗಿಡ ಮಾಯ, ಸಾರ್ವಜನಿಕ ಸಹಕಾರದ ಕೊರತೆ,ಕೆಲವು ಗಿಡಗಳೇ ನಾಪತ್ತೆ

ull
Published on

ಉಳ್ಳಾಲ: ಕಾಂಕ್ರೀಟ್ ರಸ್ತೆ ಮಧ್ಯೆ ಹಸಿರೀಕರಣದ ಕನಸು ಅಧಿಕಾರಿಯದ್ದು, ಅದಕ್ಕೆ ತಕ್ಕಂತೆ ಪರಿಸರ ಪ್ರೇಮಿಗಳ ಸಹಕಾರವೂ ದೊರೆಯಿತು. ಆದರೆ ಸಾರ್ವಜನಿಕರ ಸಹಕಾರದ ಕೊರತೆಯಿಂದ ಗಿಡಗಳು ಸಾಕುಪ್ರಾಣಿಗಳ ಪಾಲಾಗಿದೆ. ಇದು ಉಳ್ಳಾಲ ಹಸಿರೀಕರಣ ಕನಸಿನ ಕಥೆ!

ಉಳ್ಳಾಲ ನಗರ ಸುಂದರಗೊಳಿಸಬೇಕು ಎನ್ನುವ ನೆಲೆಯಲ್ಲಿ ಹಿಂದಿನ ಪೌರಾಯುಕ್ತೆ ವಾಣಿ ಆಳ್ವ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ನಗರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಪೂರ್ಣ ಪ್ರಮಾಣದಲ್ಲಿ ವಿಲೇವಾರಿ ಆಗಬೇಕು, ಸ್ವಚ್ಛ ಉಳ್ಳಾಲ ನಿರ್ಮಿಸಬೇಕು ಎನ್ನುವ ನೆಲೆಯಲ್ಲಿ ಅವರು ಸ್ವಯಂ ಮುತುವರ್ಜಿ ವಹಿಸಿದ್ದರು. ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ತೊಂದರೆಯಾಗಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾದ ಸಂದರ್ಭ ನಗರಸಭೆಯಿಂದಲೇ ವೇತನದ ವ್ಯವಸ್ಥೆ ಮಾತ್ರವಲ್ಲದೆ ಆರೋಗ್ಯ ತಪಾಸಣೆ, ಭತ್ಯೆ, ಆಟೋಟ ಸ್ಪರ್ಧೆ, ಬಹುಮಾನದಂತಹ ಯೋಜನೆಗಳನ್ನು ಜಾರಿಗೆ ತಂದು ಪೌರಕಾರ್ಮಿಕರಲ್ಲಿ ಉತ್ಸಾಹ ತುಂಬಿದ್ದರು. ಅವರ ವರ್ಗಾವಣೆ ಬಳಿಕ ರಾಯಪ್ಪ ಪೌರಾಯುಕ್ತರಾಗಿ ಬಂದಿದ್ದು ಆರಂಭದಲ್ಲೇ ಸ್ವಚ್ಛ ಉಳ್ಳಾಲದ ಕನಸು ಕಂಡರು. ಹಸಿಕಸ ಮನೆಯಲ್ಲೇ ವಿಲೇವಾರಿ ಮಾಡಿಸುವ ಸಲುವಾಗಿ ತರಕಾರಿ ಬೆಳೆಗೆ ಆದ್ಯತೆ ನೀಡಿದ್ದರು.

ಕುಂಡಗಳು ಮಾತ್ರ ಉಳಿದಿವೆ: ಮೂರು ವರ್ಷಗಳ ಹಿಂದೆಯೇ ದರ್ಗಾ ವತಿಯಿಂದ ಉಳ್ಳಾಲಾದ್ಯಂತ ರಸ್ತೆ ಬದಿ, ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿ ಸಂದರ್ಭ ಕೆಲವು ಕಡೆ ಗಿಡಗಳನ್ನು ತೆಗೆಯಲಾಗಿತ್ತು. ಮಧ್ಯಭಾಗದಲ್ಲಿ ಕಾಂಕ್ರೀಟ್ ಡಿವೈಡರ್ ಅಳವಡಿಸಲಾಯಿತು. ಇದನ್ನು ಗಮನಿಸಿದ ಪೌರಾಯುಕ್ತರು ರಸ್ತೆಮಧ್ಯೆ ಸಿಮೆಂಟ್ ಕುಂಡಗಳಲ್ಲಿ ಗಿಡಗಳನ್ನಿಟ್ಟು ಹಸಿರೀಕರಣಕ್ಕೆ ಆದ್ಯತೆ ನೀಡಿದರು. ಇದನ್ನು ಪ್ರೋತ್ಸಾಹಿಸಿದ ಪರಿಸರ ಪ್ರೇಮಿಗಳು 150 ಗಿಡಗಳ ಕುಂಡಗಳನ್ನು ನೀಡಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಈ ಗಿಡಗಳು ಸಾರ್ವಜನಿಕರ ಅಸಹಕಾರದಿಂದಾಗಿ ಸಾಕುಪ್ರಾಣಿಗಳ ಪಾಲಾದವು. ಪ್ರಸಕ್ತ ಕೆಲವು ಗಿಡಗಳು ಸತ್ತು ಹೋಗಿದ್ದರೆ, ಕೆಲವು ಸೊರಗಿವೆ. ಇನ್ನು ಕೆಲವು ಗಿಡಗಳೇ ನಾಪತ್ತೆಯಾಗಿ ಕುಂಡಗಳು ಮಾತ್ರ ಉಳಿದಿವೆ.

ಪ್ರವಾಸಿಗರ ಆಕರ್ಷಣೆಗೆ ಬೀಚ್!: ನಗರಸಭಾ ವ್ಯಾಪ್ತಿಯಲ್ಲಿ ವಾಹನಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲದ ಕಾರಣ ಮೊಗವೀರ ಪಟ್ಣ ಸಮುದ್ರ ಕಿನಾರೆ ಬಳಸಲಾಗುತ್ತಿದೆ. ಈ ಸ್ಥಳ ಪ್ರವಾಸಿಗರಿಗೆ ಆಕರ್ಷಣೀವಾಗಿದ್ದರೂ ಸಮರ್ಪಕ ರೀತಿಯಲ್ಲಿಲ್ಲ. ಇದಕ್ಕೂ ಕಾಯಕಲ್ಪ ನೀಡಲು ನಗರಸಭೆ ಮುಂದಾಗಿದ್ದು ಈಗಾಗಲೇ ಬೀಚ್ ಸ್ವಚ್ಛಗೊಳಿಸಿದ್ದು, ಇಲ್ಲಿ ಅಂಗಡಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಸೌಂದರ್ಯಕ್ಕೆ ಆದ್ಯತೆ ನೀಡಲು ಮುಂದಾಗಿದೆ. ಹಸಿಕಸ 24 ಗಂಟೆಯಲ್ಲೇ ಗೊಬ್ಬರ ಮಾಡುವಂಥ ಯಂತ್ರ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ.

ಹಸಿಕಸ ಒಣಕಸ ಮರುಬಳಕೆ ಆಗಬೇಕು, ಸುಂದರ ಉಳ್ಳಾಲಕ್ಕೆ ಜನರ ಸಹಕಾರ ಅಗತ್ಯ. ಕಸ ಪ್ರತ್ಯೇಕಿಸಿ ಕೊಟ್ಟವರಿಗೆ ವೈಯಕ್ತಿಕ ನೆಲೆಯಲ್ಲೂ ಕೃತಜ್ಞತೆ ಸಲ್ಲಿಸುವೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು, ವಾಹನ ಚಾಲಕರಿಗೆ ಸನ್ಮಾನಿಸಲು ಯೋಚಿಸಲಾಗಿದೆ.

- ರಾಯಪ್ಪ, ಉಳ್ಳಾಲ ನಗರಸಭಾ ಆಯುಕ್ತ

ರಸ್ತೆಮಧ್ಯೆ ಸೌಂದರ್ಯ ಮತ್ತು ಹಸಿರೀಕರಣಕ್ಕಾಗಿ ಇಡಲಾಗಿದ್ದ ಗಿಡಗಳ ಕುಂಡಗಳಿಗೆ ಬೇರೆ ಮಣ್ಣು ಹಾಕಿ ಸಾಕು ಪ್ರಾಣಿಗಳು ತಿನ್ನದ ಹೊಸ ಗಿಡಗಳನ್ನು ನೆಡಲು ಯೋಚಿಸಲಾಗಿದೆ. ಅದೇ ರೀತಿ ಸ್ವಚ್ಛ ಉಳ್ಳಾಲ ಕನಸು ನನಸಿಗೆ ಸರ್ವರ ಸಹಕಾರ ಯಾಚಿಸುತ್ತೇವೆ. ಬೀಚ್ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುವುದು.

-ಯು.ಪಿ.ಅಯೂಬ್ ಮಂಚಿಲ, ಉಪಾಧ್ಯಕ್ಷ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net