ರಸ್ತೆ ಅಭಿವೃದ್ಧಿಗೆ ಡಿಸೆಂಬರ್ ಗಡುವು ನಿಗದಿಪಡಿಸಿದ ಶಾಸಕಿ ರೂಪಕಲಾ

25 kgf _mla
Published on

ಕೆಜಿಎಫ್: ಅಶೋಕನಗರ ರಸ್ತೆಯಲ್ಲಿ ಕೈಗೊಳ್ಳಲಾಗಿರುವ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಶಾಸಕಿ ರೂಪಾಕಲಾ ಗಡುವು ನಿಗದಿಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಎಇಇ ರವಿ ಅವರ ಜತೆ ಬುಧವಾರ ಪರಿಶೀಲನೆ ನಡೆಸಿ, ಸಾರ್ವಜನಿಕರ ಕೆಲಸ ಮಾಡುವಾಗ ಯಾರ ಮುಲಾಜನ್ನು ನೋಡಬೇಡಿ. ಇದರಿಂದ ವಿನಾಕಾರಣ ಸಮಯ ಹಾಳಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಎಲ್ಲ ನಗರಗಳಲ್ಲೂ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದರು ನಮ್ಮ ನಗರದಲ್ಲಿ ಮಾತ್ರ ಏಕೆ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಾಗರೀಕರ ಒತ್ತಾಸೆಯಂತೆ ಆಶೋಕನಗರ ರಸ್ತೆ ಅಭಿವೃದ್ಧಿಗೆ ಹೋರಾಡಿ, ಕಾಮಗಾರಿ ಆರಂಭವಾಗುವಂತೆ ಮಾಡಿದ್ದೇನೆ ಎಂದರು.

ಕಾಮಗಾರಿಯಲ್ಲಿ ಅನಗತ್ಯ ವಿಳಂಬ, ಮಂದಗತಿಯ ಕೆಲಸವನ್ನು ನಾನೆಂದೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆಶೋಕನಗರ ರಸ್ತೆ ವಿಸ್ತರಣೆ ವಿಚಾರದಲ್ಲಿ 9 ಮೀಟರ್​ಗೆ ಗುರುತು ಹಾಕಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಶಾಸಕಿ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಟೇಪ್ ಹಿಡಿಯುವಂತೆ ಸೂಚಿಸಿ, ಸ್ವತಃ ಅವರು ಪರಿಶೀಲಿಸಿದಾಗ ಗುರುತು ಹಾಕಿರುವುದು ಸರಿಯಾಗಿದ್ದುದರಿಂದ, ಆ ಮಾರ್ಕ್​ಗೆ ಅನುಗುಣವಾಗಿ ಕಟ್ಟಡವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net