

ಮಂಡ್ಯ: ತಾಲೂಕಿನ ವಿವಿಧ ಗ್ರಾಮಗಳಲ್ಲಿ 3 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 50 ವರ್ಷದಿಂದ ರಸ್ತೆ ಅಭಿವೃದ್ದಿ ಕಾಣದೆ ನನೆಗುದಿಗೆ ಬಿದ್ದಿವೆ. ನನ್ನ ಅವಧಿಯಲ್ಲಿ ಅನುದಾನ ತಂದು ರಸ್ತೆಗಳ ಡಾಂಬರೀಕರಣ ಮಾಡಿಸಲಾಗುತ್ತಿದೆ. ಅದರಂತೆ ಕೆರಗೋಡು ಹೋಬಳಿಯ ಚಿಕ್ಕಬಾಣಸವಾಡಿ ಮತ್ತು ಗುಡಿಗೇನಹಳ್ಳಿ ಗ್ರಾಮದ ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ವಿನಿಯೋಗ ಮಾಡಲಾಗುತ್ತಿದೆ ಎಂದರು.
1.50 ಕೋಟಿ ರೂ ವೆಚ್ಚದಲ್ಲಿ ಹೊನ್ನಾಯ್ಕನಹಳ್ಳಿ ಗೇಟ್‌ನಿಂದ ದೊಡ್ಡಬಾಣಸವಾಡಿ ಗ್ರಾಮದವರೆಗೆ ಹಾಗೂ 1.50 ಕೋಟಿ ರೂ ವೆಚ್ಚದಲ್ಲಿ ಗುಡಿಗೇನಹಳ್ಳಿ ಗೇಟ್‌ನಿಂದ ಗ್ರಾಮದವರೆಗೆ ರಸ್ತೆ ಅಭಿವೃದ್ದಿಯಾಗಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಯೋಜನೆ ಬಳಸಿ ದೇವಾಲಯ, ರಸ್ತೆ, ನಾಲೆ, ಕೆರೆ ಕಟ್ಟೆ ಜೀರ್ಣೋದ್ದಾರ ಮಾಡಲಾಗುವುದು ಎಂದು ಹೇಳಿದರು.
ಮುಖಂಡರಾದ ಚಂದ್ರು, ಭೈರವ, ಮಹೇಶ್ ಇತರರಿದ್ದರು. ಇದೇ ವೇಳೆ ಚಿಕ್ಕಬಾಣಸವಾಡಿ ಗ್ರಾಮದಲ್ಲಿ ಹಲವು ಮುಖಂಡರು ಅನ್ಯಪಕ್ಷ ತೊರೆದು ಶಾಸಕ ರವಿಕುಮಾರ್ ಗಣಿಗ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.