ರಸ್ತೆ ಅಭಿವೃದ್ಧಿಗೆ ಸಿಎಂ ವಿಶೇಷ ಅನುದಾನ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Road development work started Mandya
Published on

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂ ವಿಶೇಷ ಅನುದಾನ ನೀಡಿದ್ದಾರೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಹುನಗನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಅವರು ವಿಶೇಷ ಅನುದಾನ ನೀಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅಂತೆಯೇ ಅನುದಾನದಿಂದ ಗುಣಮಟ್ಟದ ರಸ್ತೆಗಳನ್ನು ಮಾಡಲಾಗುವುದು. ಇದರೊಟ್ಟಿಗೆ ದೇವಸ್ಥಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಪುರಾಣ ಪ್ರಸಿದ್ಧ ಕೆರಗೋಡು ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಲನಕ್ಷೆ ತಯಾರು ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದರು.

ಹುನಗನಹಳ್ಳಿ ಗ್ರಾಮದ ಕಾಲನಿಗೆ ಸುಮಾರು 40 ವರ್ಷದಿಂದ ರಸ್ತೆ ಇರಲಿಲ್ಲ. ಗುಂಡಿ ಬಿದ್ದ ರಸ್ತೆಯಲ್ಲಿಯೇ ಓಡಾಟ ಮಾಡಬೇಕಿತ್ತು. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ 50 ಲಕ್ಷ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅಂತೆಯೇ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಎಂ.ಹಟ್ನ ಗ್ರಾಮದಲ್ಲಿ 20 ಲಕ್ಷ ರೂ ಅನುದಾನದಲ್ಲಿ ಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾಮಗಾರಿಗೆ ಕೋಟ್ಯಂತರ ರೂ ಅನುದಾನ ನೀಡುತ್ತಿದೆ ಎಂದು ಹೇಳಿದರು.

ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಹುನಗನಹಳ್ಳಿ ಗ್ರಾಪಂ ಸದಸ್ಯ ಶಿವಕುಮಾರ್, ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಬೋರೇಗೌಡ, ಬಸರಾಳು ಶಂಕರೇಗೌಡ, ವಕೀಲ ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net