ಬಸರಾಳು, ದೇವಲಾಪುರ ಹೋಬಳಿಗೆ ಕಾವೇರಿ ನೀರು: ಶಾಸಕ ರವಿಕುಮಾರ್ ಗಣಿಗ ಮಾಹಿತಿ

Road development work launched Mandya
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಮಂಡ್ಯ ತಾಲೂಕಿನ ಬಸರಾಳು ಹಾಗೂ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಗೆ ಕಾವೇರಿ ನೀರನ್ನು ಹರಿಸಲು 1 ಸಾವಿರ ಕೋಟಿ ರೂ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿಯೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.

ತಾಲೂಕಿನ ಬಸರಾಳು ಗ್ರಾಮದಲ್ಲಿ ಮುಖ್ಯವೃತ್ತ ಅಭಿವೃದ್ಧಿ, ಫುಟ್‌ಪಾತ್ ನಿರ್ಮಾಣ ಹಾಗೂ ಬಸರಾಳು-ಕೊಡಿಕೊಪ್ಪಲು ಸಂಪರ್ಕ ರಸ್ತೆ ಅಭಿವೃದ್ಧಿ ಮಾಡುವ 2 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸರಾಳು ಹೋಬಳಿಯಲ್ಲಿ ಈಗಾಗಲೇ ನೂರಾರು ಕೋಟಿ ರೂ ವೆಚ್ಚದ ಅಭಿವೃದ್ದಿ ಕಾಮಗಾರಿ ನಡೆಯುತ್ತಿವೆ. ವಾರಕ್ಕೆ ಒಂದೊಂದು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಇನ್ನೊಂದು ವಾರದಲ್ಲಿ ಬಸರಾಳು ಗ್ರಾಮದ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ. ಇದರ ಜತೆಗೆ ಕಾಲಭೈರವೇಶ್ವರಸ್ವಾಮಿ ಕಲ್ಯಾಣ ಮಂಟಪವನ್ನು 50 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿ ಮಾಡಲಾಗುವುದು. ಇದರಿಂದ ಆರ್ಥಿಕವಾಗಿ ಸದೃಢವಾಗಿಲ್ಲದವರು ತಮ್ಮ ಮಕ್ಕಳ ಮದುವೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತುತ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿಯ ಹೊಳೆಯೇ ಹರಿಯುತ್ತಿದೆ. ಪ್ರಮುಖವಾಗಿ ಈಗ ಮುಖ್ಯರಸ್ತೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಟ್ಟು ಕಾಮಗಾರಿ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಇನ್ನಷ್ಟಯ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷ ಜವರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಶಾಸಕರನ್ನು ಬಸರಾಳು ಗ್ರಾಮಸ್ಥರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net