ಆಮೆಗತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ

29_07_2025_BNG_RURAL_PAGE_3
ವಿಜಯಪುರ ಪಟ್ಟಣದ ಅಂಕತಟ್ಟಿ ನಂಜುಡಪ್ಪ ವೃತ್ತದಿಂದ ಕೋಲಾರ ರಸ್ತೆವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯನ್ನು ಲೋಕಾಯುಕ್ತ ಅಧಿಕಾರಿ ಹಾಲಪ್ಪ ಬಾಲದಂಡಿ ನೇತೃತ್ವದ ತಂಡ ಪರಿಶೀಲಿಸಿತು. ಸಬ್​ ಇನ್​ಸ್ಪೆಕ್ಟರ್​ ಸಾಧಿಕ್​ ಪಾಷಾ, ಮಂಜುನಾಥ್​, ಪುರಸಭಾ ಅಧಿಕಾರಿಗಳಾದ ಸತ್ಯನಾರಾಯಣ, ಶೇಖರ್​ ಇಲಾಖೆ ಸಿಬ್ಬಂದಿ ಇದ್ದರು.
Published on

ವಿಜಯಪುರ : ಪಟ್ಟಣದ ಅಂಕತಟ್ಟಿ ನಂಜುಡಪ್ಪ ವೃತ್ತದಿಂದ ಕೋಲಾರ ರಸ್ತೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿ ಹಾಲಪ್ಪ ಬಾಲದಂಡಿ ನೇತೃತ್ವದ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಲಿತು.

ಪಟ್ಟಣದಿಂದ ಕೋಲಾರ ರಸ್ತೆಗೆ ಸಂಪರ್ಕಿಸುವ ಮಾರ್ಗದ ವಿಸ್ತರಣೆ ಕಾಮಗಾರಿ ದಿನೇದಿನೆ ವಿಳಂಬವಾಗುತ್ತಿರುವ ಕಾರಣ ಮಳೆಯಾದ ರಸ್ತೆ ಕೆಸರು ಗದ್ದೆಯಂತಾಗುತ್ತಿದೆ. ಬಿಸಿಲಿದ್ದಾಗ ವಿಫರೀತ ಧೂಳಿನಿಂದ ವಾಹನ ಸವಾರರು, ಪಾದಾಚಾರಿಗಳು, ಮಾರ್ಗಬದಿಯ ಅಂಗಡಿಕಾರರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ಆರಂಭ ದಿನದಿಂದ ಅಪಘಾತಗಳೂ ಸಂಭವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಆದರೂ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡುತ್ತಿಲ್ಲ ಎಂದು ನಾಗರಿಕರು ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿ ಹಾಲಪ್ಪ ಬಾಲದಂಡಿ, ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುರಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಎಂಜಿನಿಯರ್​ಗೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದರು.

ವಿವಿಧೆಡೆ ಭೇಟಿ: ಪಟ್ಟಣದ ಪ್ರಮುಖ ರಸ್ತೆ ಗಾಂಧಿಚೌಕದಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ, ಪಾದಚಾರಿ ಮಾರ್ಗಗಳಲ್ಲಿ ತೆರೆದಿರುವ ಮಳಿಗೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ಲೋಕಾಯುಕ್ತರಿಗೆ ಗಮನಕ್ಕೆ ತಂದಾಗ, ಪಟ್ಟಣದ ಗಾಂಧಿ ಚೌಕ, ಹಳೇ ಸರ್ಕಾರಿ ಆಸ್ಪತ್ರೆ ಬಳಿ ಪಾದಚಾರಿ ಮಾರ್ಗದಲ್ಲೇ ತೆರೆದಿರುವ ಮಳಿಗೆಗಳನ್ನು ಹಾಲಪ್ಪ ಬಾಲದಂಡಿ ಅವರು ಪರಿಶೀಲಿಸಿದರಲ್ಲದೇ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net