ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ ಬಿಡುಗಡೆ

Road Development, Grants, Vijayapura, Mallikarjuna Ashram, Jnana Yoga Ashram, Siddharudh Math, Basanagowda Patil Yatnala,
ಬಸನಗೌಡ ಪಾಟೀಲ ಯತ್ನಾಳ
Published on

ವಿಜಯಪುರ: ನಗರದ ಬಿಎಲ್‌ಡಿಇ ಆಸ್ಪತ್ರೆಯ ತಡೆಗೋಡೆಯಿಂದ ಮಲ್ಲಿಕಾರ್ಜುನ ಆಶ್ರಮದ (ಜ್ಞಾನಯೋಗಾಶ್ರಮ) ಹಿಂದಿನ ರಸ್ತೆ ಮೂಲಕ ಸಿದ್ಧಾರೂಢ ಮಠದವರೆಗೆ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 2023-24 ನೇ ಸಾಲಿನ ಸಿಆರ್‌ಎಫ್ ಯೋಜನೆಯಡಿ 6 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

ಸಿದ್ಧಾರೂಢ ಮಠದ ರಸ್ತೆ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ಖುದ್ದಾಗಿ ರಸ್ತೆ ಪರಿಶೀಲಿಸಿ, ತ್ವರಿತವಾಗಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದೆ. ಅದರಂತೆ, ಸದ್ಯ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹಾಗೂ ನಗರದ ಅಂದವನ್ನು ಹೆಚ್ಚಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ, ನಗರದ ಹಲವು ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ, ಬಿಎಲ್‌ಡಿಇ ಆಸ್ಪತ್ರೆ ತಡೆಗೋಡೆಯಿಂದ ಮಲ್ಲಿಕಾರ್ಜುನ ಆಶ್ರಮದ ಹಿಂದಿನ ರಸ್ತೆಯ ಮೂಲಕ ಸಿದ್ಧಾರೂಢ ಮಠದವರೆಗಿನ ಸುಮಾರು 2 ಕಿ.ಮೀ. ಉದ್ದದ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಡಕ್ಟ್, ಡ್ರೇನ್, ಫುಟಪಾತ್ ಮತ್ತು ಮಾದರಿ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೆ, ರಸ್ತೆ ಒತ್ತುವರಿ ಮಾಡಿಕೊಂಡಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತೆರವುಗೊಳಿಸಿ ಅಭಿವೃದ್ಧಿಗೆ ಸಹಕರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net