ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ

5MDL1-Web
ಅರಬಾವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಮೂಡಲಗಿ ತಾಲೂಕಿನ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ತಹಸೀಲ್ದಾರ್ ದಿಲ್‌ಶಾದ್ ಮಹಾತ, ತಾಪಂ ಇಒ ಬಸವರಾಜ ಹೆಗ್ಗನಾಯಿಕ ಹಾಗೂ ಇತರರು ಇದ್ದರು.
Published on

ಮೂಡಲಗಿ: ಅರಬಾವಿ ಮತಕ್ಷೇತ್ರದ ರಸ್ತೆಗಳ ಸುಧಾರಣೆಗಾಗಿ ಪಿಎಂಜಿಎಸ್‌ವೈ ಯೋಜನೆ ಅಡಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಮೂಡಲಗಿ ತಾಲೂಕಿನ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಿರಂತರ ಮಳೆಯಿಂದ ರಾಜ್ಯ ಹಾಗೂ ಜಿಲ್ಲಾ ಭಾಗದ ಮುಖ್ಯ ರಸ್ತೆಗಳು ಹಾಳಾಗಿದ್ದು, ಕೂಡಲೇ ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ತೋಟಗಳಲ್ಲಿ ವಾಸಿಸುವ ಗುಂಪು ಜನರಿಗೆ ನಿರಂತರ ಜ್ಯೋತಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು. ಅಕ್ರಮ-ಸಕ್ರಮ
ಯೋಜನೆಯ ಅಡಿ ಹಣ ತುಂಬಿದ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಗೋಸಬಾಳ 110/11 ಕೆವಿ ಸ್ಟೇಷನ್ ಕಾಮಗಾರಿಯನ್ನು ಕೂಡಲೇ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ದಿಲ್‌ಶಾದ್ ಮಹಾತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಬಿಇಓ ಅಜಿತ ಮನ್ನಿಕೇರಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತ್ವರಿತ ಪರಿಹಾರ ವಿತರಣೆಗೆ ಸೂಚನೆ

ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲ ಪಿಂಚಣಿ ಸೌಲಭ್ಯಗಳು ಸ್ಥಗಿತಗೊಂಡಿದ್ದು, ಫಲಾನುಭವಿಗಳು ಕಚೇರಿಗೆ ಅಲೆದಾಡುತ್ತಿದ್ದಾರೆ. ಕೂಡಲೇ ಪಿಂಚಣಿ ಸೌಲಭ್ಯ ಒದಗಿಸಬೇಕು. 2019-20ನೇ ಸಾಲಿನಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಪರಿಹಾರ ಇನ್ನೂ ಕೆಲ ರೈತರಿಗೆ ಸಂದಾಯವಾಗಿಲ್ಲ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. 2020-21ನೇ ಸಾಲಿನ ಅರಬಾವಿ ಕ್ಷೇತ್ರಾದ್ಯಂತ ಹಾನಿಯಾದ ಬೆಳೆಗಳ ಸಮೀಕ್ಷೆ ಕೈಗೊಂಡು ರೈತರಿಗೆ ಕೂಡಲೇ ಪರಿಹಾರ ಧನ ತಲುಪಿಸುವಂತೆ ಶಾಸಕ ಬಾಲಚಂದ್ರ ಅಧಿಕಾರಿಗಳು ಸೂಚಿಸಿದರು.

ಕಳೆದ ವರ್ಷದ ಅಗಸ್ಟ್ ತಿಂಗಳ ಪ್ರವಾಹದಿಂದ ಹಾನಿಗೊಳಗಾದ ಮನೆಗಳಲ್ಲಿ 590 ಮನೆಗಳು ತಾಂತ್ರಿಕ ಕಾರಣದಿಂದ ಹಾಗೂ ಅಗತ್ಯ ದಾಖಲೆಗಳನ್ನು ನೀಡದ ಕಾರಣ ರದ್ದಾಗಿದ್ದು, 693 ಮನೆಗಳು ಡಾಟಾ ಎಂಟ್ರಿಯಲ್ಲಿ ಬಾಕಿ ಇವೆ. ಒಟ್ಟು 1283 ಫಲಾನುಭವಿಗಳಿಗೆ ಪರ್ಯಾಯವಾಗಿ ವಸತಿ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ರದ್ದಾದ ಮನೆಗಳ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು.| ಬಾಲಚಂದ್ರ ಜಾರಕಿಹೊಳಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net