ರಸ್ತೆ ಹಾಳು, ಸಂಚಾರಕ್ಕೆ ಗೋಳು

26KOKATANUR1 (1)-Web
ಅಥಣಿ ತಾಲೂಕಿನ ಖವಟಕೊಪ್ಪದಿಂದ ದರೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತಗ್ಗು-ಗುಂಡಿಯಿಂದ ಕೂಡಿರುವುದು.
Published on

ಕೊಕಟನೂರ: ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಿಂದ ದರೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಿತ್ತು, ತಗ್ಗು ಗುಂಡಿ ಬಿದ್ದು ರಸ್ತೆ ಹಾಳಾಗಿದೆ. ಈ ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ರಸ್ತೆ ಸೇರಿದ್ದು, ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಲ್ಲಿ ನೀರಿನ ರಭಸಕ್ಕೆ ಡಾಂಬರೀಕರಣ ಕಿತ್ತು ಹೋಗಿತ್ತು. ಈಗ ಮತ್ತೆ ಮಳೆ ಪ್ರಾರಂಭವಾಗಿದ್ದು, ಮಳೆ ನೀರೆಲ್ಲ ಈ ರಸ್ತೆಯಲ್ಲಿನ ಗುಂಡಿಯಲ್ಲಿ ತುಂಬುತ್ತಿರುವುದರಿಂದ ವಾಹನ ಸವಾರರಿಗೆ, ದಾರಿ ಹೋಕರಿಗೆ ತೊಂದರೆಯಾಗುತ್ತಿದೆ. ಬಸವೇಶ್ವರ ಗಲ್ಲಿ, ಪಾಟೀಲ, ಚೌಗಲಾ ತೋಟದ ವಸತಿ ಸೇರಿ ಇತರ ತೋಟದ ವಸತಿಗಳಿಗೆ ಮತ್ತು ಈ ರಸ್ತೆಯಿಂದ ಒಳ ಮಾರ್ಗವಾಗಿ ಶೇಗುಣಸಿ ಹಾಗೂ ಪಕ್ಕದ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಗ್ರಾಮದಿಂದ ತೋಟದ ವಸತಿ ಹಾಗೂ ದೈನಂದಿನ ಕೆಲಸಕ್ಕಾಗಿ ಅಥಣಿ ಪಟ್ಟಣಕ್ಕೆ ನೂರಾರು ಜನರು ನಿತ್ಯ ಸಂಚರಿಸುತ್ತಾರೆ. ಆದರೆ, ವರ್ಷ ಕಳೆದರೂ ಈ ರಸ್ತೆ ಮಾತ್ರ ಇಲ್ಲಿಯವರೆಗೆ ದುರಸ್ತಿ ಕಂಡಿಲ್ಲ. ಸರ್ಕಾರ ಪ್ರವಾಹದಿಂದ ನದಿ ದಡದಲ್ಲಿರುವ ಹಾಳಾದ ರಸ್ತೆಗಳ ಸುಧಾರಣೆಗೆ ಕೋಟ್ಯಂತರ ರೂ. ಬಿಡುಗಡೆ ಮಾಡಿದೆ. ಆದರೆ, ಈ ರಸ್ತೆ ಮಾತ್ರ ಡಾಂಬರೀಕರಣವಾಗದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ರಸ್ತೆ ಮೇಲಿನ ಡಾಂಬರ್ ಕಿತ್ತು ಹೋಗಿದೆ. ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಮತ್ತು ಗ್ರಾಪಂನಿಂದ ಹಲವು ಬಾರಿ ಮನವಿ ನೀಡಲಾಗಿದೆ. ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಈಗ ಮತ್ತೆ ಮಳೆಗಾಲ ಆರಂಭ ಆಗಿದೆ. ದಿನಕ್ಕೆ ಒಬ್ಬರಾದರೂ ಬಿದ್ದು ಗಾಯ ಮಾಡಿಕೊಳ್ಳುವುದು ತಪ್ಪಿಲ್ಲ. ವಾರದೊಳಗೆ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ.| ಬಾವುರಾಜ ಬಿಸ್ವಾಗರ ಗ್ರಾಪಂ ಮಾಜಿ ಸದಸ್ಯ, ಖವಟಕೊಪ್ಪಈ ರಸ್ತೆ ಡಾಂಬರೀಕರಣ ಕಾಮಗಾರಿಗೆ 2 ಕೋಟಿ ರೂ. ಮಂಜೂರಾಗಿದೆ. ಆರ್ಥಿಕ ಇಲಾಖೆಯಿಂದ ನಮಗೆ ಅನುಮತಿ ಸಿಗಲು ತಡವಾಗಿದೆ. ಅವರಿಂದ ಅನುಮತಿ ಬಂದ ತಕ್ಷಣ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು. | ಎಂ.ಬಿ. ಇಮ್ಮಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಅಥಣಿ.

| ಮೋಹನ ಪಾಟನಕರ ಕೊಕಟನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net