ಒತ್ತಿನೆಣೆ ಅಪಾಯಕಾರಿ ಸಂಚಾರ, ಆರು ತಿಂಗಳಲ್ಲಿ ಎಂಟಕ್ಕೂ ಅಧಿಕ ಅವಘಡ

road
Published on

ಬೈಂದೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ನಿಯಂತ್ರಿಸುವ ಉದ್ದೇಶ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಚತುಷ್ಪಥ ಕಾಮಗಾರಿ ಹಾಗೂ ಉತ್ತಮ ತಂತ್ರಜ್ಞಾನದ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಚತುಷ್ಪಥ ಕಾಮಗಾರಿಯ ಅವಾಂತರ, ಅಪಘಾತಗಳಿಗೆ ಕಾರಣವಾಗುತ್ತಿದೆ.

ಹೆದ್ದಾರಿ ಕಾಮಗಾರಿ ನಡೆಸುವ ಕಂಪನಿಗೆ ಬೈಂದೂರು ಒತ್ತಿನೆಣೆ ಪ್ರದೇಶ ಸವಾಲಾಗಿ ಪರಿಣಮಿಸಿದೆ. ಜೇಡಿ ಮಣ್ಣಿನಿಂದಾವೃತವಾದ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಿರುವುದು ಆರಂಭದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಎರಡು ಬಾರಿ ಗುಡ್ಡ ಕುಸಿತ ಉಂಟಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳ ನಿರಂತರ ಒತ್ತಡದಿಂದ ಸುಗಮ ರಸ್ತೆ ನಿರ್ಮಾಣವಾದರೂ ಅವೈಜ್ಞಾನಿಕ ಚಿಂತನೆಯಿಂದಾಗಿ ಈ ಪ್ರದೇಶದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರ ಅಪಾಯಕಾರಿ ತಿರುವುಗಳನ್ನು ಸರಿಪಡಿಸಿ ರಸ್ತೆ ಪ್ರಯಾಣಿಕರಿಗೆ ಅಪಘಾತ ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಶಿರೂರು ಕಡೆಯಿಂದ ಬೈಂದೂರು ಮಾರ್ಗವಾಗಿ ಸಾಗುವಾಗ ಎಡಭಾಗದ ರಸ್ತೆ ಸಾಕಷ್ಟು ಎತ್ತರದಲ್ಲಿದೆ. ಇಳಿಜಾರಿನಲ್ಲಿ ಒಮ್ಮೆಲೆ ತಿರುವು ಎದುರಾಗುವುದರಿಂದ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರಸ್ತೆಗೆ ಉರುಳುತ್ತಿದೆ. ಅಲ್ಲದೆ ಇದೇ ಇಳಿಜಾರಿನಲ್ಲಿ ಗುಡ್ಡೆಯ ನೀರು ಹರಿದು ಬರುತ್ತಿರುವುದರಿಂದ ಭಾರಿ ವಾಹನಗಳು ರಸ್ತೆಯ ಮಗ್ಗುಲಲ್ಲಿ ಸಾಲಾಗಿ ನಿಂತು ಚಾಲಕ ಹಾಗೂ ಕ್ಲೀನರ್ ಸ್ನಾನಾದಿ ಕೆಲಸ ಮಾಡಿಕೊಳ್ಳುತ್ತಾರೆ. ಇದರಿಂದಲೂ ಕೆಳಗೆ ಬರುವ ವಾಹನಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹೀಗಾಗಿ ಕಳೆದ ಆರು ತಿಂಗಳಲ್ಲಿ ಎಂಟಕ್ಕೂ ಅಧಿಕ ಅಪಘಾತಗಳು ನಡೆದಿವೆ. ಆದ್ದರಿಂದ ಇಲಾಖೆ ಮತ್ತು ಗುತ್ತಿಗೆ ಕಂಪನಿ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಗಮನಹರಿಸಿ ತಾತ್ಕಾಲಿಕ ಕ್ರಮಕೈಗೊಳ್ಳಬೇಕಿದೆ.

ಒತ್ತಿನೆಣೆ ಅಪಾಯದ ತಿರುವು ಹಾಗೂ ಅವೈಜ್ಞಾನಿಕ ಕಾಮಗಾರಿ ಕುರಿತು ಈ ಹಿಂದೆ ಆರಕ್ಷಕ ಇಲಾಖೆ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದೆ. ನಿರಂತರ ಅಪಘಾತ ನಡೆಯುವುದಕ್ಕೆ ಹೆದ್ದಾರಿ ಅಸಮರ್ಪಕತೆ ಕಾರಣವಾಗಿತ್ತು. ಹೀಗಾಗಿ ಶೀಘ್ರ ಸರಿಪಡಿಸಲು ತಿಳಿಸಿದ್ದು ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ಮೌಕಿಕವಾಗಿ ತಿಳಿಸಿದ್ದಾರೆ.

-ಸಂತೋಷ್ ಆನಂದ ಕಾಯ್ಕಿಣಿ, ವೃತ್ತ ನಿರೀಕ್ಷಕರು ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net