

ವಿಜಯವಾಣಿ ಸುದ್ದಿಜಾಲ ಕುಮಟಾ
ಜಿಲ್ಲಾಧಿಕಾರಿಗಳು ವಾಸ್ತವ್ಯ ಮಾಡುತ್ತಾರೆಂದು ಅಷ್ಟಿಷ್ಟು ದುರಸ್ತಿ ಮಾಡಿದ್ದ ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಮೇದಿನಿಯ ರಸ್ತೆ ಮಳೆಗೆ ಸಂಪೂರ್ಣ ಹಾಳಾಗಿದೆ.
ಕಳೆದ ವರ್ಷ ಮೇದಿನಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಜಿಪಂ ಸಿಇಓ ಎಂ.ರೋಷನ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿದ್ದರು. ಜಿಲ್ಲಾಧಿಕಾರಿಗಳು ಬರುತ್ತಾರೆಂದು ತುರ್ತಾಗಿ ವಾಹನ ಸಂಚಾರ ಮಾಡುವಷ್ಟು ದುರಸ್ತಿ ಮಾಡಲಾಗಿತ್ತು. ಸರಿಯಾಗಿ ಗಟಾರವನ್ನೂ ಮಾಡಿರಲಿಲ್ಲ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸ್ಥಳೀಯ ಕೃಷ್ಣ ಗೌಡ ಹೇಳುವ ಪ್ರಕಾರ, ರಸ್ತೆಗೆ ಗಟಾರ ಇಲ್ಲದ್ದರಿಂದ ಮಳೆಗೆ ರಸ್ತೆ ಬಹುತೇಕ ಕೊಚ್ಚಿ ಹೋಗಿದೆ. ವಾಹನ ಸಂಚಾರ ಸಾಧ್ಯವಿಲ್ಲ. ಹೀಗೇ ಬಿಟ್ಟರೆ ರಸ್ತೆ ದುರಸ್ತಿ ಮಾಡುವುದಕ್ಕೂ ಕಷ್ಟವಾಗಬಹುದು. ಹೀಗಾಗಿ ಊರಿನ ಜನರೇ ಶ್ರಮದಾನದಿಂದ ಸ್ವಂತ ಖರ್ಚಿನಲ್ಲಿ 5 ಕಿಮೀಗಳಷ್ಟು ತಾತ್ಕಾಲಿಕ ಗಟಾರ ಮಾಡಿ ನೀರು ಹರಿದು ಹೋಗಲು ಅನುಕೂಲ ಮಾಡಿಕೊಂಡಿದ್ದೇವೆ. ಸರ್ಕಾರ ಕೂಡಲೇ ಮೇದಿನಿಗೆ ಕಾಂಕ್ರೀಟ್ ರಸ್ತೆ ನಿರ್ವಣಕ್ಕೆ ವಿಶೇಷ ಅನುದಾನ ಮಂಜೂರಿ ಮಾಡಬೇಕು ಎಂದಿದ್ದಾರೆ.
ಮೇದಿನಿಗೆ ರಸ್ತೆ ನಿರ್ವಿುಸುವುದಕ್ಕೆ ಸಂಬಂಧಿಸಿ ಅಲ್ಲಿನ ಅರಣ್ಯ ಸಮಸ್ಯೆ ಬಗೆಹರಿಸುವುದು ದೊಡ್ಡ ಕಗ್ಗಂಟು, ಹೀಗಾಗಿ ಅನುದಾನ ತರುವುದೂ ದೊಡ್ಡ ಸವಾಲೇ ಆಗಿದೆ. ಆದರೂ ಮೇದಿನಿ ಗ್ರಾಮದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. | ದಿನಕರ ಶೆಟ್ಟಿ ಶಾಸಕ