

ನರೇಂದ್ರ ಎಸ್. ಮರಸಣಿಗೆ ಹೆಬ್ರಿಯ ಕೆಳಪೇಟೆಯಲ್ಲಿ ಹೆಬ್ರಿ ಭಾಗದ ಚರಂಡಿ ನೀರು ನಿರಂತರವಾಗಿ ಹರಿದು ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲೇ ಸಮೀಪ ಬೃಹತ್ ಗಾತ್ರದ ಗುಂಡಿಯೊಂದು ಸೃಷ್ಟಿಯಾಗಿ ಜೀವ ಕಂಟಕವಾಗಿದೆ. ರಾಷ್ಟ್ರೀಯ ಹೆದ್ದಾರಿ 169ಎ ಇದರ ಭಾಗವಾಗಿರುವ ಈ ರಸ್ತೆ ಪ್ರತಿವರ್ಷ ಸಮಸ್ಯೆ ಇರುತ್ತದೆ. ಅಧಿಕಾರಿಗಳಿಗೆ ಈ ಬಗ್ಗೆ ಗಮನಕ್ಕೆ ತಂದಾಗ ಕೇವಲ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿ ಕೈತೊಳೆದುಕೊಳ್ಳುತ್ತಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅಂಗಡಿಯವರು ಒತ್ತಾಯಿಸಿದ್ದಾರೆ. ಕೆಸರು ನೀರಿನ ಸಿಂಚನ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ವೇಗಕ್ಕೆ ಮಿತಿಯೇ ಇಲ್ಲವೆಂಬಂತೆ ವಾಹನಗಳು ಸಂಚರಿಸುತ್ತವೆ. ಜೋರಾಗಿ ಮಳೆ ಬಂದಾಗ ಹಳ್ಳದ ರೀತಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚರಂಡಿ ನೀರು ಹರಿಯುತ್ತದೆ. ವಾಹನಗಳು ವೇಗವಾಗಿ ಚಲಿಸುವಾಗ ಕೆಸರು ನೀರು ಚಿಮ್ಮುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಕೆಸರು ನೀರು ಎರಚುತ್ತದೆ. ಅಲ್ಲದೆ ಹೆದ್ದಾರಿ ಪಕ್ಕದ ಅಂಗಡಿಗಳಿಗೂ ಕೆಸರು ನೀರು ಹಾರುತ್ತದೆ.
ನೀರು ನಿರಂತರವಾಗಿ ಹರಿದು ರಸ್ತೆಯಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಸದಾ ನೀರಿ ಇರುವುದರಿಂದ ಬಹುತೇಕರಿಗೆ ಗುಂಡಿ ಇರುವುದೇ ಅರಿವಿಗೆ ಬರುವುದಿಲ್ಲ. ಬೈಕ್ ಸವಾರರು ಕಿಂಚಿತ್ತು ಎಡವಿದರೂ ಪ್ರಾಣಕ್ಕೆ ಕುತ್ತುಂಟಾಗುವ ಸಾಧ್ಯತೆ ಇದೆ. ಶೀಘ್ರವೇ ಗುಂಡಿ ಮುಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಆಗುಂಬೆಯಿಂದ ಹೆಬ್ರಿಯ ತನಕ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿಭಾಗ ವಹಿಸಿಕೊಂಡಿತ್ತು. ಕಾರಣಾಂತರಗಳಿಂದ ಹೆದ್ದಾರಿ ನಿರ್ವಹಣೆಯನ್ನೇ ಕೈಬಿಟ್ಟಿದೆ. ಇದರಿಂದಾಗಿ ಮತ್ತೆ ಈ ಹಿಂದೆ ಇದ್ದ ಶಿವಮೊಗ್ಗ ವಿಭಾಗಕ್ಕೆ ನಿರ್ವಹಣೆ ನೀಡಲಾಗಿದೆ.
ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಹೆಬ್ರಿ ಪೇಟೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹಳ್ಳದ ರೀತಿಯಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತದೆ. ಸಮಸ್ಯೆ ಆದಾಗ ತಾತ್ಕಾಲಿಕವಾಗಿ ದುರಸ್ತಿಪಡಿಸುತ್ತಾರೆ. ಬಹಳ ಹಿಂದಿನ ಸಮಸ್ಯೆ ಆಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು ಡಿವಿಜನ್ ಈ ಹೆದ್ದಾರಿ ರಸ್ತೆ ನಿರ್ವಹಣೆಯ ಅಧಿಕಾರ ಹೊಂದಿದ್ದರು. ಮತ್ತೆ ನಮ್ಮ ಹೆಗಲಿಗೆ ಬಂದಿದೆ. ಶೀಘ್ರದಲ್ಲಿ ದುರಸ್ತಿ ಮಾಡಿ ಕೊಡುತ್ತೇವೆ. ಮಂಜುನಾಥ್ ನಾಯ್ಕ, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೆಳಪೇಟೆಯಲ್ಲಿ ಚರಂಡಿ ನೀರು ಹರಿಯುತ್ತದೆ. ನೂರಾರು ಮಂದಿ ಈ ರಸ್ತೆಯಲ್ಲಿ ಕೆಸರಿನ ಸಿಂಚನ ನಿರಂತರವಾಗಿ ನಡೆಯುತ್ತದೆ. ಜೀವಕಂಟಕ ಗುಂಡಿ ಇದ್ದು, ದ್ವಿಚಕ್ರ ಸವಾರರಿಗೆ ಅಪಾಯ ಸಾಧ್ಯತೆ ಹೆಚ್ಚಿದೆ. ಹರೀಶ್ ಶೆಟ್ಟಿ ನಾಡ್ಪಾಲು, ಸಮಾಜ ಸೇವಕರು.