

ಮಡಕೇರಿ: ಮಡಿಕೇರಿ-ಸಂಪಾಜೆ ಹೆದ್ದಾರಿ ಮಾರ್ಗದ ದೇವರಕೊಲ್ಲಿ ಬಳಿ ರಸ್ತೆ ಬಿರುಕು ಬಿಟ್ಟಿರುವ ಪ್ರದೇಶವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಬುಧವಾರ ವೀಕ್ಷಿಸಿದರು.
ರಸ್ತೆ ಬಿರುಕು ಸಂಬಂಧಿಸಿದಂತೆ ಕೂಡಲೇ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಇ ಜಿ.ಎನ್.ಹೆಗಡೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬುಧವಾರ ಬೆಳಗ್ಗೆ ೮.೩೦ ಕ್ಕೆ ಕೊನೆಗೊಂಡಂತೆ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೨೮ ಮಿ.ಮೀ. ಮಳೆಯಾಗಿದ್ದು, ಚೆಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಕೆಲವು ಕಡೆ ಬರೆ ಕುಸಿದಿದೆ. ಹಾಗೆಯೇ ಮದೆ ಗ್ರಾ.ಪಂ.ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿಯಲ್ಲಿ ರಸ್ತೆಗೆ ಮಣ್ಣು ಕುಸಿದಿದ್ದು, ಜೆಸಿಬಿ ಮೂಲಕ ಮಣ್ಣು ಸರಿಪಡಿಸುವ ಕಾರ್ಯ ನಡೆದಿದೆ. ಚೆಂಬು, ಪೆರಾಜೆ ಮತ್ತು ಸಂಪಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಅಲ್ಲಲ್ಲಿ ಮನೆ ಮತ್ತು ಬೆಳೆಗೆ ಹಾನಿ ಆಗಿದೆ ಎಂದು ಗ್ರಾ.ಪಂ.ಪಿಡಿಒ ಮಾಹಿತಿ ನೀಡಿದರು.
ಬಳಿಕ ಕೊಯನಾಡು ಸೇತುವೆಯ ಹಿಂಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿರವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಪಿ.ಎಸ್.ಮಹೇಶ್ ಇತರರು ಇದ್ದರು.