

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರದ ಶಿವಗಂಗೆ ವೃತ್ತದಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ಅವಾಂತರ ಸೃಷ್ಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೋರಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಶ್ರೀನಿವಾಸ ಚಾಲನೆ ನೀಡಿದರು.
ವೈಜ್ಞಾನಿಕ ಕಾಮಗಾರಿ ಕೈಗೊಳ್ಳುವ ಮೂಲಕ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಕಾಮಗಾರಿ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ನನ್ನ ಅವಧಿಯಲ್ಲಿ ಶಾಶ್ವತ ಕಾಮಗಾರಿ ಆದ್ಯತೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಸೋಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಆರ್.ಜಗದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಎಚ್.ಟಿ.ಸುರೇಶ್, ಮುಖಂಡ ವೀರಸಾಗರ ಗಂಗರುದ್ರಯ್ಯ, ಗೋಟ್ಟಿಕೆರೆ ಮೂರ್ತಿ, ಬಿ.ಸಿ.ರಾಜಣ್ಣ ಇತರರಿದ್ದರು.
ಗಮನ ಸೆಳೆದಿದ್ದ ವಿಜಯವಾಣಿ
ಶಿವಗಂಗೆ ರಸ್ತೆಯಲ್ಲಿ ಕೆಶಿಪ್‌ನಿಂದ ನಿರ್ಮಾಣ ಮಾಡಿದ್ದ ರಸ್ತೆಯಲ್ಲಿ ಮಳೆ ಬಂದರೆ ಮಿನಿಕೆರೆಯಾಂತಾಗಿ ಸಂಚಾರಕ್ಕೆ ಪರದಾಡುವಂತಾಗಿತ್ತು. ಆದ್ದರಿಂದ ಸಾರ್ವಜನಿಕರು ಮನವಿ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ 80 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಹಣದಲ್ಲಿ ನೀರು ಹರಿಯಲು ಬ್ರಿಡ್ಜ್ ನಿರ್ಮಿಸಿ, 300 ರಿಂದ 400 ಮೀಟರ್ ಡಾಂಬರ್ ಹಾಕಲು ತೀರ್ಮಾನಿಸಲಾಗಿತ್ತು. ಮಾಜಿ ಶಾಸಕರು ಭೂಮಿ ಪೂಜೆ ನಡೆಸಿ ಸುಮಾರು ಆರೇಳು ತಿಂಗಳಾದರೂ ಕಾಮಗಾರಿ ಕುಂಟುತ್ತಾ ಸಾಗಿತ್ತು. ಈ ಬಗ್ಗೆ ಆಗಸ್ಟ್ 13 ರಂದು ವಿಜಯವಾಣಿಯಲ್ಲಿ 80 ಲಕ್ಷ ಹಣ ಡೋಲಾಯಮಾನ! ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಗಮನಸೆಳೆಯಲಾಗಿತ್ತು.