

ಉಡುಪಿ: ಶಾರದ ಮಂಟಪದಿಂದ ಬೀಡಿನ ಗುಡ್ಡೆ ರಸ್ತೆ ಸುಸ್ಥಿತಿಯಲ್ಲಿದ್ದರೂ ಅದನ್ನು ಅಗೆದು ಕಾಂಕ್ರಿಟೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ವಾಹನ ಸಂಚಾರಕ್ಕೆ ಸುಸ್ಥಿತಿಯಲಿದ್ದ ರಸ್ತೆಯನ್ನು ಅಗೆದು ಮರು ಕಾಂಕ್ರೀಟೀಕರಣ ಮಾಡುವುದು ಸರಿಯಲ್ಲ ಎಂದು ನಗರ ಸಭೆ ಮಾಜಿ ಸದಸ್ಯ ನಿತ್ಯಾನಂದ ವಳಕಾಡು ಜೆಸಿಬಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ ಮಾಡಿ, ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದೊಂದು ದುಂದು ಹೆಚ್ಚಿದ ಕಾಮಗಾರಿ ಆರೋಪಿಸಿದರು. ಸ್ಥಳಕ್ಕೆ ಆಗಮಿಸಿದ ನಗರಸಭಾ ಸದಸ್ಯ ಗಿರೀಶ್ ಅಂಚನ್, 27 ವರ್ಷಗಳ ಹಿಂದಿನ ಕಾಂಕ್ರೀಟ್ ರಸ್ತೆ ಗುಣಮಟ್ಟ ಕಳೆದುಕೊಂಡಿದೆ. ಹೆದ್ದಾರಿಯಿಂದ ಶಾರದ ಮಂಟಪವರೆಗೆ ಈಗಾಗಲೇ ಹೊಸ ರಸ್ತೆ ನಿರ್ಮಾಣವಾಗಿದೆ. ಒಳಚರಂಡಿ ನಿರ್ಮಾಣ ಮಾಡುವ ಸಂದರ್ಭ ಕೆಲವೆಡೆ ರಸ್ತೆ ಹಾಳಾಗಿದ್ದು ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಭಟನ ಸ್ಥಳಕ್ಕೆ ಬಂದ ಸ್ಥಳೀಯರು, ಹಳೆಯ ರಸ್ತೆ ಮತ್ತು ಹೊಸ ರಸ್ತೆ ಅಗಲ ಎತ್ತರ ವ್ಯತ್ಯಾಸ ಬರುತ್ತದೆ. ಮುಂದೆ ಮಳೆಗಾಲದಲ್ಲಿ ಹೊಂಡ ಬೀಳುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರ ಹೊಸ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿದರು. ಈ ಬಗ್ಗೆ ನಿತ್ಯಾನಂದ ಒಳಕಾಡು ನಗರಸಭೆ ಕಮಿಷನರ್ ಗಮನ ಸೆಳೆದಿದ್ದು , ಸದ್ಯಕ್ಕೆ ಕಾಂಕ್ರೀಟ್ ರಸ್ತೆ ಅಗೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.