ಅರ್ಹರಿಗಷ್ಟೇ ಮನೆ ವಿತರಿಸಿ ; ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಲಹೆ

10Tmk_Gowrishankar_Road
Published on

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 14 ಕೋಟಿ ರೂ., ವೆಚ್ಚದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಗುರುವಾರ ಚಾಲನೆ ನೀಡಿದರು.

ಪಾಲಸಂದ್ರದಿಂದ ಹೊಳಕಲ್ಲು ಹ್ಯಾಂಡ್ ಪೋಸ್ಟ್‌ವರೆಗೆ 2.15 ಕೋಟಿ ರೂ.,, ಪೆರುಮನಹಳ್ಳಿ ಗೇಟ್‌ನಿಂದ ದೊಡ್ಡನಾರವಂಗಲ ರಸ್ತೆ ಅಭಿವೃದ್ಧಿಗೆ 3.57 ಕೋಟಿ ರೂ., ಮುದಿಗೆರೆ-ಅಗಲಗುಂಟೆ ಮಾರ್ಗದಿಂದ ಬಳ್ಳಾಪುರ ಚಾನಲ್ ಮೇಲೆ ಸಿಂಗ್ರಿಪಾಳ್ಯ ಗೇಟ್ ಮೂಲಕ ಚಿಕ್ಕಬೆಳ್ಳಾವಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 6.11 ಕೋಟಿ ರೂ., ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರೈತರ ಬಹುದಿನದ ಬೇಡಿಕೆಯಾಗಿದ್ದ ಈ ರಸ್ತೆಗಳನ್ನು 14 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ವಸತಿ ಯೋಜನೆಯಡಿ ಮನೆಗಳನ್ನು ಅರ್ಹರಿಗೆ ನೀಡಲಾಗುವುದು. ಹೊಸದಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಹಂಚಿಕೆಯಾಗಿರುವ 800 ಮನೆಗಳನ್ನು ಅರ್ಹರಿಗೆ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರೂ ಹಣವನ್ನು ನೀಡಿ ವಸತಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುವುದು ಬೇಡ, ಅರ್ಹರಿಗೆ ಮನೆ ನೀಡುವ ವಿಚಾರದಲ್ಲಿ ಯಾವುದೇ ಪಕ್ಷವನ್ನು ಗಮನಿಸದೇ, ಯಾವುದೇ ಶಿಫಾರಸುಗಳಿಗೆ ಒಳಗಾಗದೆ ಅರ್ಹರಿಗೆ ಮನೆಯನ್ನು ನೀಡಲು ಕ್ರವಮಹಿಸಲು ಸೂಚಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಲಾಗುವುದು. ಕರೊನಾ ಸಂದರ್ಭದಲ್ಲಿ ಮನೆಯಲ್ಲಿ ಕೂರದೇ ಮನೆ ಮನೆಗೆ ಪಡಿತ ನೀಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನೀಡಿರುವ ಉಳಿದ ಭರವಸೆಗಳನ್ನು ಈಡೇರಿಸಲು ಸಮಯಾವಕಾಶ ಬೇಕಿದೆ ಎಂದರು. ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಪಾಲನೇತ್ರಯ್ಯ, ಹೆಗ್ಗೆರೆ ಆಜಂ ಮತ್ತಿತರರು ಇದ್ದರು.

ಅನುದಾನ ತರುವುದು ಗೊತ್ತಿದೆ: ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರು ಗೌರಿಶಂಕರ್ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಗ್ರಾಮಾಂತರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ. ಯಾರೇ ಅನುದಾನಕ್ಕೆ ಅಡ್ಡಿಪಡಿಸಿದರೂ ವಿಧಾನಸೌಧದಿಂದ ಅನುದಾನ ತರುವುದು ಹೇಗೆ ಅನ್ನುವುದು ನನಗೆ ಗೊತ್ತಿದೆ, ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ ಎಂದು ಗೌರಿಶಂಕರ್ ಪರೋಕ್ಷವಾಗಿ ಸುರೇಶ್‌ಗೌಡಗೆ ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net