

ಉಡುಪಿ: ಬಹು ವರ್ಷಗಳ ಬೇಡಿಕೆಯಾಗಿರುವ ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಕಾಮಗಾರಿ ವೇಳೆ ವಾಹನ ಸವಾರರ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಮಿಶನ್ ಕಾಂಪೌಂಡ್- ಬೈಲೂರು- ಕೊರಂಗ್ರಪಾಡಿ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಉಡುಪಿ- ಮಿಶನ್ ಕಾಂಪೌಂಡ್‌ನಿಂದ ಸಾಗುವ ಆರಂಭಿಕ ಹಂತದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಒಂದು ಬದಿಯ ರಸ್ತೆಯನ್ನು ಸಂಚಾರಕ್ಕೆ ಬಿಡಲಾಗಿದೆ. ಕಾಂಕ್ರೀಟ್ ರಸ್ತೆ ಮತ್ತು ಈಗಿರುವ ಹಳೇ ರಸ್ತೆ ನಡುವೆ ಕೃತಕ ಕಂದಕ ಸೃಷ್ಟಿಯಾಗಿದೆ.
ಇನ್ನೊಂದು ಬದಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದು ಆತಂಕಕ್ಕೆ ಕಾರಣವಾಗಿದೆ. ಈ ಕಿರಿದಾದ ರಸ್ತೆಯಲ್ಲಿ ವಾಹನಗಳು ಎದುರುಬದುರಾದಾಗ ನಿಯಂತ್ರಣ ತಪ್ಪಿದರೆ ಕಂದಕಕ್ಕೆ ಬಿದ್ದು ಗಂಭೀರ ಗಾಯಗೊಳ್ಳುವ ಸ್ಥಿತಿ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ರಸ್ತೆಗಾಗಿ ಮಣ್ಣು ಅಗೆಯುವಾಗ ಅಪಾರ್ಟ್‌ಮೆಂಟ್ ಸಮೀಪದ ಕುಡಿಯುವ ನೀರಿನ ಪೈಪ್ ತುಂಡಾಗಿದ್ದು, ನೀರು ಸೋರಿಕೆಯಾಗುತ್ತಿದ್ದು, ಇನ್ನೂ ಸರಿಪಡಿಸಿಲ್ಲ.
ಮಣ್ಣು ತುಂಬಿಸಿ, ಸೂಚನಾ ಫಲಕ ಹಾಕಿ
ಸದ್ಯ ಮಿಶನ್ ಕಂಪೌಂಡ್ ಸಮೀಪ ಅಪಾರ್ಟ್‌ಮೆಂಟ್ ಎದುರು ಕಾಮಗಾರಿ ನಡೆಯುತ್ತಿದೆ. ಇನ್ನೂ ಬೈಲೂರು- ಕೊರಂಗ್ರಪಾಡಿವರೆಗೂ ಕಾಮಗಾರಿ ನಡೆಯಬೇಕಿದೆ. ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು, ಗುತ್ತಿಗೆದಾರರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಮಧ್ಯೆ ಇರುವ ಕಂದಕಕ್ಕೆ ಮಣ್ಣು ತುಂಬಿಸಬೇಕು, ರಸ್ತೆ ಮಾಡುವಾಗ ಬೇಕಾದಲ್ಲಿ ಮಣ್ಣು ತೆಗೆದುಕೊಳ್ಳಬಹುದು ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಈಗಾಗಲೆ ಅಪಾರ್ಟ್‌ಮೆಂಟ್ ಎದುರಿನಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಬಿದ್ದು, ಗಾಯಗೊಂಡಿದ್ದಾರೆ. ಎರಡು ಬದಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ, ನಿಧಾನದಿಂದ ವಾಹನ ಚಲಿಸುವಂತೆ ಸ್ಪಷ್ಟವಾಗಿ ಬೋರ್ಡ್ ಅಳವಡಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.
4.22 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣಕ್ಕೆ ಸ್ಥಳೀಯರೇ ಸ್ವಯಂಪ್ರೇರಿತವಾಗಿ ಟಿಡಿಆರ್ (ಟ್ರಾನ್ಸ್‌ಫರ್ ಆಫ್ ಡೆವಲಪ್‌ಮೆಂಟ್ ರೈಟ್) ವ್ಯವಸ್ಥೆ ಅಡಿಯಲ್ಲಿ ಅಗತ್ಯ ಭೂಮಿ ನೀಡಿದ್ದಾರೆ. ಕೊರಂಗ್ರಪಾಡಿ ಜಂಕ್ಷನ್‌ನಿಂದ ಮಿಷನ್ ಕಾಂಪೌಂಡ್ ಜಂಕ್ಷನ್‌ವರೆಗೆ ಚರಂಡಿ ಸಹಿತ ಒಟ್ಟು 40 ಅಡಿ ಅಗಲದ ಕಾಂಕ್ರೀಟ್ ರಸ್ತೆ 4.22 ಕೋಟಿ ರೂ. ವೆಚ್ಚದಲ್ಲಿ 1.56 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದೆ.
ಬಹು ವರ್ಷದ ಬೇಡಿಕೆಯಂತೆ ರಸ್ತೆ ಅಗಲಗೊಳ್ಳುತ್ತಿದೆ, ಗುಣಮಟ್ಟದಿಂದ ಕಾಮಗಾರಿ ಸಾಗುತ್ತಿದೆ. ಆದರೆ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಿರಿದಾದ ರಸ್ತೆಯಲ್ಲಿ ಆಯತಪ್ಪಿ ಬೀಳುವ ಸಾಧ್ಯತೆ ಇದೆ. ಈಗಾಗಲೆ ಇಬ್ಬರು ಪೆಟ್ಟು ಮಾಡಿಕೊಂಡಿದ್ದಾರೆ. ಕಂದಕ, ರಸ್ತೆ ಬದಿಯ ಗುಂಡಿಗೆ ಮಣ್ಣು ತುಂಬಿಸಿ ಈಗಾಗದಂತೆ ನೋಡಿಕೊಳ್ಳಬೇಕು. ತುಂಡಾದ ಕುಡಿಯುವ ನೀರಿನ ಪೈಪ್‌ಲೈನ್ ಸರಿಪಡಿಸಬೇಕು.
ಸದಾನಂದ ಅಂಚನ್, ಬೈಲೂರು
ರಸ್ತೆ ಕಾಮಗಾರಿ ಭರದಿಂದ ಸಾಗುತಿದ್ದು, ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ತುಂಡಾದ ಕುಡಿಯುವ ನೀರಿನ ಪೈಪ್ ಲೈನ್‌ನ್ನು ಕೂಡಲೆ ದುರಸ್ತಿ ಪಡಿಸಲು ಸೂಚನೆ ನೀಡಲಾಗುವುದು.
- ಮೋಹನ್‌ರಾಜ್, ಎಇಇ, ಉಡುಪಿ ನಗರಸಭೆ