ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

4RAVIG5-Web
ಗುಣಮಟ್ಟದ ರಸ್ತೆ, ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಖಾನಾಪುರ ತಾಲೂಕಿನ ಹಲವು ಗ್ರಾಮಗಳ ಗ್ರಾಮಸ್ಥರು ಬುಧವಾರ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು. ರಮೇಶ ಪಾಟೀಲ, ಪುಂಡಲೀಕ ಭಾವಡೆ, ದತ್ತಾರಾಮ ಗುರವ ಇದ್ದರು.
Published on

ಬೆಳಗಾವಿ: ಖಾನಾಪುರ ತಾಲೂಕಿನ ಹಲವು ಗ್ರಾಮಗಳಿಗೆ ಗುಣಮಟ್ಟದ ಕಾಮಗಾರಿ ಮೂಲಕ ಸಮರ್ಪಕ ರಸ್ತೆ ಸಂಪರ್ಕ ಕಲ್ಪಿಸುವುದು ಹಾಗೂ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕಾಪೋಲಿ, ಚಾಪೋಲಿ, ಮುಡಗೈ ಹಾಗೂ ಚಿರೆಖಾನಿ ಗ್ರಾಮಸ್ಥರು ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನ್ಯಾಯವಾದಿ ರಾಜು ಬಾಗೇವಾಡಿ ಮಾತನಾಡಿ, ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಖಾನಾಪುರ ತಾಲೂಕಿನ ಈ ಗ್ರಾಮಗಳಿಗೆ ಮಾತ್ರ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿನ ಜನರು ಬದುಕಿದ್ದಾರೊ ಅಥವಾ ಇಲ್ಲವೋ ಎಂಬುದನ್ನೂ ಸಹ ಯಾವ ಸರ್ಕಾರ ನೋಡುತ್ತಿಲ್ಲ. ಸಾಕಷ್ಟು ಸಮಸ್ಯೆಗಳಿಂದ ಇಲ್ಲಿನ ಜನರು ನರಳುತ್ತಿದ್ದಾರೆ. ತಕ್ಷಣವೇ ಈ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಕ್ರಮಕೈಗೊಳ್ಳಬೇಕು.

ಸ್ವಾತಂತ್ರ್ಯ ಸಿಕ್ಕು ದಶಕಗಳಾಗಿದ್ದರೂ ಖಾನಾಪುರ ತಾಲೂಕಿನ ಕಾಪೋಲಿ, ಚಾಪೋಲಿ, ಮುಡಗೈ ಹಾಗೂ ಚಿರೆಖಾನ ಸೇರಿ ಸುತ್ತಮುತ್ತಲಿನ ಅನೇಕ ಗ್ರಾಮಗಳು ರಸ್ತೆ, ವಿದ್ಯುತ್, ಸಾರಿಗೆ-ಸಂಪರ್ಕ ಸೇರಿ ಅಗತ್ಯ ಸೌಕರ್ಯ ಗಳಿಂದ ವಂಚಿತವಾಗಿವೆ. ಅಲ್ಲದೆ ಈ ಗ್ರಾಮಗಳು ಅರಣ್ಯ ಪ್ರದೇಶದಲ್ಲಿರುವುದರಿಂದ ಕಚ್ಚಾ ರಸ್ತೆ ಮಾಡಲಾಗಿತ್ತು. ಆದರೆ, ಅವುಗಳೆಲ್ಲ ಧಾರಾಕಾರ ಮಳೆಯಿಂದ ಕಿತ್ತು ಹೋಗಿವೆ. ಇದರಿಂದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇರಿ ಇತರ ವಾಹನಗಳು ಈ ಗ್ರಾಮಕ್ಕೆ ಬರದಂತ ರೀತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಆದ್ದರಿಂದ ತ್ವರಿತವಾಗಿ ಪಕ್ಕಾ ರಸ್ತೆ ಮಾಡಲು ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಇದುವರೆಗೂ ಮೂಲಸೌಕರ್ಯಗಳನ್ನು ತಲುಪಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಅಲ್ಲದೇ ಇಲ್ಲಿನ ಮಕ್ಕಳಿಗೆ ಓದಲು ಸರಿಯಾಗಿ ಶಾಲೆಯಿಲ್ಲ, ನಡೆದಾಡಲು ಸರಿಯಾದ ರಸ್ತೆಯಿಲ್ಲ, ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಕತ್ತಲೆಯಲ್ಲಿಯೇ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ ಪಾಟೀಲ, ಪುಂಡಲೀಕ ಭಾವಡೆ, ದತ್ತಾರಾಮ ಗುರವ, ಮಹಾದೇವ ನಾಯಿಕ, ಮನೋಹರ ಗಾವಡೆ ಸೇರಿ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net