

ಬೆಂಗಳೂರು: ರಾಜರಾಜೇಶ್ವರಿನಗರ ವಲಯದ ಹೊಸಕೆರೆಹಳ್ಳಿ ಕೋಡಿ ರಸ್ತೆಯ ಬಳಿಯಿರುವ ರಾಜಕಾಲುವೆಯ ಬಫರ್ ವಲಯದಲ್ಲಿ ರಸ್ತೆ ನಿರ್ಮಿಸಲು ಬಿಬಿಎಂಪಿ ಆದ್ಯತೆ ನೀಡಿದೆ ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಆರ್.ಆರ್.ನಗರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಬಫರ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಬಫರ್ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡ ಜಾಗಕ್ಕೆ ಟಿಡಿಆರ್ ಪರಿಹಾರ ನೀಡಿ ಪಾಲಿಕೆ ಸುಪರ್ದಿಗೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
300 ಕಿ.ಮೀ. ಸಂಚಾರಯುಕ್ತ ರಸ್ತೆ ನಿರ್ಮಾಣ:
ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ರಾಜಕಾಲುವೆಗಳ ಬಫರ್ ವಲಯದಲ್ಲಿ ಸಂಚಾರಯುಕ್ತ ಯೋಜನೆ ಅಡಿಯಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಈ ಪೈಕಿ ಆರ್.ಆರ್.ನಗರ ವಲಯ ವ್ಯಾಪ್ತಿಯಲ್ಲಿ 70 ಕಿ.ಮೀ. ಉದ್ದದ ರಸ್ತೆಯನ್ನು ಆಯ್ಕೆ ಮಾಡಲಾಗಿದ್ದು, ಇದರಿಂದ ಸಾಕಷ್ಟು ಪ್ರದೇಶಗಳಿಗೆ ಹೊಸದಾಗಿ ರಸ್ತೆ ಸಂಪರ್ಕ ಕಲ್ಪಿಸಬಹುದಾಗಿದೆ ಎಂದು ‘ಬಿ-ಸ್ಮೈಲ್’ ಸಂಸ್ಥೆಯ ತಾಂತ್ರಿಕ ನಿರ್ದೇಶಕರು ಕಮಿಷನರ್‌ಗೆ ಮಾಹಿತಿ ನೀಡಿದರು.
ಹೊಸಕೆರೆಹಳ್ಳಿ ಮೇಲ್ಸೇತುವೆ ಪರಿಶೀಲನೆ:
ರಿಂಗ್ ರಸ್ತೆಯ ಪಿಇಎಸ್ ಕಾಲೇಜು ಬಳಿ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದು, ಮುಂದಿನ ಅಕ್ಟೋಬರ್ ವೇಳೆಗೆ ಸಾರ್ವಜನಿಕ ಸೇವೆಗೆಮುಕ್ತಗೊಳಿಸಲಾಗುವುದು. ಸದ್ಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ 500 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ.85 ಪೂರ್ಣಗೊಂಡಿದ್ದು, ನಾಯಂಡಹಳ್ಳಿ ಜಂಕ್ಷನ್ ಡೌನ್ ರಾಂಪ್ ಕಾಮಗಾರಿ ಮಾತ್ರ ಬಾಕಿಯಿದೆ. ಈ ಸಂಬಂಧ ಬಾಕಿಯಿರುವ ಕೆಲಸಕ್ಕೆ ವೇಗ ನೀಡಿ ಗಡುವಿನೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಸೂಚಿಸಿದರು.
ತಪಾಸಣೆ ವೇಳೆ ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಚೋಳನ್, ‘ಬಿ-ಸ್ಮೈಲ್’ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್, ಬಿಬಿಎಂಪಿ ವಿಶೇಷ ಆಯುಕ್ತ ಕರೀಗೌಡ, ವಲಯ ಆಯುಕ್ತ ಸತೀಶ್, ಮುಖ್ಯ ಅಭಿಯಂತರ ರಾಜೇಶ್, ಸ್ವಯಂಪ್ರಭಾ ಉಪಸ್ಥಿತರಿದ್ದರು.
ಜಲಮಂಡಳಿಯಿಂದ ದುರಸ್ತಿಗೆ ಕ್ರಮ:
ಹೊಸಕೆರೆ ಹಳ್ಳಿಯ ಶ್ರೀನಿವಾಸ ರಸ್ತೆಯಲ್ಲಿ ಜಲಮಂಡಳಿಯು ಸಂಪೂರ್ಣ ರಸ್ತೆಯನ್ನು ಅಗೆದು ಕಾಮಗಾರಿ ನಡೆಸಿದೆ. ಸದ್ಯ ಕಾಮಗಾರಿ ಪೂರ್ಣಗೊಂಡಿದ್ದರೂ, ಇನ್ನೂ ದುರಸ್ತಿ ಕಾರ್ಯ ನಡೆಸಿಲ್ಲ. ಹೀಗಾಗಿ ಜಲಮಂಡಳಿಯಿಂದಲೇ ರಸ್ತೆ ದುರಸ್ತಿ ಕೈಗೆತ್ತಿಕೊಳ್ಳುವಂತೆ ಮಾಹಿತಿ ರವಾನಿಸಲು ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು.