

ಸಕಲೇಶಪುರ: ಮಲೆನಾಡಿನ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಿದ್ದೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಗುರುವಾರ ತಾಲೂಕಿನ ಬಾಳ್ಳುಪೇಟೆ ಸಮೀಪದ ಗಾಂಧಿನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮಲೆನಾಡಿನ ಜನರಿ ಬೇಡಿಕೆ ಕುಡಿಯುವ ನೀರು, ರಸ್ತೆ, ವಿದ್ಯುತ್. ಆದರೆ ಸ್ವಾತಂತ್ರೃ ಬಂದು 75 ವರ್ಷಗಳು ಸಂದರೂ ಈ ಬೇಡಿಕೆ ಈಡೇರಿಸಲು ಸಾದ್ಯವಾಗದಿರುವುದು ದುರದೃಷ್ಟಕರ. ಸದ್ಯ ಅನುದಾನ ಬಿಡುಗಡೆ ವಿಚಾರದಲ್ಲಿ ಇಂದಿನ ಸರ್ಕಾರ ಎಲ್ಲ ತಾಲೂಕುಗಳಂತೆ ಮಲೆನಾಡನ್ನು ಪರಿಗಣಿಸುತ್ತಿದೆ. ಇದರಿಂದಾಗಿ ವಿಶಾಲ ಗಾತ್ರದ ತಾಲೂಕಿನ ಮೂಲಸೌಕರ್ಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ಬೇಸರ ತೋಡಿಕೊಂಡರು.
ಹೆಚ್ಚಿನ ಅನುದಾನಕ್ಕೆ ಈಗಾಗಲೇ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹೇರಲಾಗಿದ್ದು, ಬಾಕಿ ಉಳಿದಿರುವ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಶೀಘ್ರದಲ್ಲೆ ಅಭಿವೃದ್ಧಿಪಡಿಸಲು ಪ್ರಯತ್ನ ನಡೆಸಲಿದ್ದೇನೆ ಎಂದರು.
ಈ ವೇಳೆ ಬಾಳ್ಳುಪೇಟೆ ಗ್ರಾಪಂ ಅಧ್ಯಕ್ಷೆ ಲತಾ ಚಂದ್ರು, ಉಪಾಧ್ಯಕ್ಷ ಸ್ವಾಮಿ, ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚ ಅಧ್ಯಕ್ಷೆ ನೇತ್ರಾವತಿ, ಶಿವಕುಮಾರ್, ಮಂಜುನಾಥ್ ಇತರರು ಇದ್ದರು.