ಸರ್ಕಲ್ ಬಳಿ ಬಿತ್ತು ರೋಡ್ ಬ್ರೇಕ್..!

Road break near the circle..!
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಗೇಟ್ ಬಳಿ ಶುಕ್ರವಾರ ಅಪಘಾತಗಳ ತಡೆಗೆ ರೋಡ್ ಬ್ರೇಕ್ ಹಾಕುತ್ತಿರುವುದು.
Published on

ಮುದ್ದೇಬಿಹಾಳ: ಅಪಘಾತಗಳ ವಲಯವಾಗಿದ್ದ ಪಟ್ಟಣದ ಹುಡ್ಕೋ ಗೇಟ್ ಬಳಿ ಕೆಆರ್‌ಡಿಸಿಎಲ್ ಅಧಿಕಾರಿಗಳು ಶುಕ್ರವಾರ ರೋಡ್ ಬ್ರೇಕ್ ಅಳವಡಿಸುವ ಮೂಲಕ ನಾಗರಿಕರ ಬಹುದಿನಗಳ ಆಗ್ರಹಕ್ಕೆ ಸ್ಪಂದಿಸಿದ್ದಾರೆ.

ಪಟ್ಟಣದ ಹುಡ್ಕೋದಿಂದ ವಿಜಯಪುರ ರಸ್ತೆ ಹಾಗೂ ಬಸ್ ನಿಲ್ದಾಣ ಕಡೆಗೆ ತೆರಳುವ ವಾಹನ ಸವಾರರು, ಹಳೇ ಸರ್ಕಾರಿ ದವಾಖಾನೆಯಿಂದ ಹುಡ್ಕೋ ಕಡೆಗೆ ತೆರಳುವ ಬೈಕ್ ಸವಾರರು, ಕಾರು, ಜೀಪು ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಈ ವೃತ್ತವನ್ನು ದಾಟಬೇಕಾಗಿತ್ತು. ರಸ್ತೆಯ ಗುತ್ತಿಗೆ ವಹಿಸಿಕೊಂಡಿರುವ ಅಶೋಕ ಬಿಲ್ಡಕಾನ್ ಕಂಪನಿಯ ಅಧಿಕಾರಿಗಳು ಕೃಷಿ ಇಲಾಖೆ ಸಮೀಪದಲ್ಲಿ ಹಾಗೂ ಬೆಂಗಳೂರು ಬೇಕರಿ ಹತ್ತಿರದಲ್ಲಿ ರೋಡ್ ಬ್ರೇಕ್ ಹಾಕಿದ್ದಾರೆ.

ರೋಡ್ ಬ್ರೇಕ್ ಹಾಕುವ ಸ್ಥಳಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ವಾಲ್ಮೀಕಿ ಸಮಾಜದ ಮುಖಂಡ ಹುಲಗಪ್ಪ ನಾಯ್ಕಮಕ್ಕಳ, ವೈಜ್ಞಾನಿಕವಾಗಿ ರೋಡ್ ಬ್ರೇಕ್ ಹಾಕಿದರೆ ಯಾವುದೇ ಅಪಘಾತಗಳಾಗಲೂ ಸಾಧ್ಯವಿಲ್ಲ. ಪಟ್ಟಣದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಹುಡ್ಕೋ ಗೇಟ್ ಬಳಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಅಶೋಕಾ ಬಿಲ್ಡಕಾನ್ ವ್ಯವಸ್ಥಾಪಕ ಪಿ.ಕೆ. ಕಿತ್ತಲಿ, ಕೆಆರ್‌ಡಿಸಿಎಲ್‌ನಿಂದ ಅಧಿಕೃತವಾಗಿ ಸೂಚನೆ ಬಂದರೆ ಅಳವಡಿಸುವುದಾಗಿ ತಿಳಿಸಿದರು. ಶಾಸಕರಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಸಲಾಗುವುದು ಎಂದು ಶಾಂತಗೌಡ ಪಾಟೀಲ ಹೇಳಿದರು.

ಹುಡ್ಕೋ ಗೇಟ್ ಸಮೀಪವೇ ಎರಡು ತಿಂಗಳ ಅವಧಿಯಲ್ಲಿಯೇ ವಾಹನಗಳ ಡಿಕ್ಕಿಯಿಂದ ಇಬ್ಬರು ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದರು. ಪಟ್ಟಣದ ಜನಸೇವಾ ಸಂಸ್ಥೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು, ಹೋರಾಟಗಾರರು ರೋಡ್ ಬ್ರೇಕ್ ಹಾಕುವಂತೆ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net