

ದೊಡವಾಡ: ಬೆಳವಡಿಯಿಂದ ಬುಡರಕಟ್ಟಿ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ರಾಜ್ಯ ಹೆದ್ದಾರಿ ತುಂಬಾ ಹದಗೆಟ್ಟಿದೆ. ಈ ರಸ್ತೆ ದುರಸ್ತಿಗಾಗಿ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮಸ್ಥರು ಮಂಗಳವಾರ ವಾಹನ ತಡೆದು ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಡುವುದರ ಮೂಲಕ ಪ್ರತಿಭಟಿಸಿದರು.
ಈ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತಿದ್ದು, ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಪ್ರತಿ ನಿತ್ಯ ಸಂಚರಿಸುವ ಸಿಬ್ಬಂದಿಯ ಗೋಳು ಹೇಳತಿರದಾಗಿದೆ. ಬುಡರಕಟ್ಟಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇತ್ತ ಗಮನ ಹರಿಸದಿರುವ ಕಾರಣ ಸ್ಥಳೀಯರು ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ಗಂಟೆಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸುಮಾರು ಒಂದು ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜೆ.ಬಿ. ಪಾಟೀಲ ಶೀಘ್ರ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ಮಂಗಳಗಟ್ಟಿ, ನಾಗರಾಜ ಸವಟಗಿ, ಕಲ್ಲಯ್ಯ ಹುಗ್ಗಿ, ದ್ಯಾಮನಗೌಡ ಪಾಟೀಲ, ಷಣ್ಮುಖ ತೋಟಗಿ ಮತ್ತು ಇತರರು ಇದ್ದರು.